ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳು ಒಟ್ಟುಗೂಡಿ ಪ್ರತ್ಯೇಕ ಪುತ್ತೂರು ಜಿಲ್ಲೆ ರಚನೆಯಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈಗಾಗಲೇ ಈ ಕುರಿತು ಹೋರಾಟ ಸಮಿತಿಯನ್ನೂ ರಚಿಸಲಾಗಿದೆ ಎನ್ನಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಉಡುಪಿ ಜಿಲ್ಲೆಯನ್ನು ಸರ್ಕಾರ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ. ಇದರಲ್ಲಿ ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಪುತ್ತೂರು ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿದೆ. ಇದಕ್ಕಾಗಿ ಈ ಭಾಗದ ಪ್ರಮುಖರು ಒಂದು ಹಂತದ ಸಭೆಯನ್ನು ನಡೆಸಿ, ಹೋರಾಟ ಸಮಿತಿಯನ್ನು ರಚಿಸಲಾಗಿದೆ.
ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದ ಜನರಿಗೆ ತಮ್ಮ ಕೆಲಸ ಕಾರ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಮಂಗಳೂರಿಗೆ ಬರಲು ತುಂಬಾ ಅನಾನುಕೂಲವಾಗುತ್ತಿದೆ. ಪುತ್ತೂರು ಜಿಲ್ಲೆ ರಚನೆಯಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪುತ್ತೂರು ಜಿಲ್ಲಾ ಹೋರಾಟ ಸಮಿತಿ ಮುಖಂಡ ಅಶೋಕ್ ರೈ ಹೇಳಿದ್ದಾರೆ.
ಈಗಾಗಲೇ ಘೋಷಣೆಯಾಗಿರುವ ಕಡಬ ತಾಲೂಕು ಕೂಡ ಇದರ ವ್ಯಾಪ್ತಿಗೆ ಬರುತ್ತದೆ. ಬಂಟ್ವಾಳ ತಾಲೂಕಿನಲ್ಲಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರದೇಶಗಳು ಈ ವ್ಯಾಪ್ತಿಗೆ ಬರುತ್ತದೆ. ಪ್ರತಿಯೊಂದಕ್ಕೂ ಜಿಲ್ಲಾ ಕೇಂದ್ರ ಮಂಗಳೂರಿಗೆ ಇಲ್ಲಿನ ಜನರು ಬರಲು ಅಸಾಧ್ಯ. ಸುಮಾರು ದೂರ, ಸಮಯ ವ್ಯರ್ಥ ಮಾಡಿಕೊಂಡು ಬರಬೇಕು. ಪುತ್ತೂರು ಜಿಲ್ಲೆ ಮಾಡಿದರೆ ಇದಕ್ಕೆಲ್ಲ ಅನುಕೂಲವಾಗಲಿದೆ ಎಂದು ಹೋರಾಟಗಾರರ ಅಭಿಪ್ರಾಯವಾಗಿದೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುತ್ತೂರು ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂಬ ಕೂಗು ಕೇಳಿಬಂದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮತ್ತೆ ವಿಭಜನೆಯಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
Click this button or press Ctrl+G to toggle between Kannada and English