ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿರುವ ಮಂಗಳೂರು ನಗರದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ರೂ.16,57,000/- ನಗದು ಹಣ,ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ಇಳಂತಿಲ ನಿವಾಸಿ ಮಹಮ್ಮದ್ ಶಾಫಿ(26) ಹಾಗೂ ಬೆಳ್ತಂಗಡಿ ನೆಜಿಕಾರ್ ನಿವಾಸಿ ಮಹಮ್ಮದ್ ರಿಯಾಜ್(19) ಬಂಧಿತ ಆರೋಪಿಗಳು.
ದಿನಾಂಕ:20-10-2018 ರಂದು ರಾತ್ರಿ 7-30 ಗಂಟೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಶ್ರೀರಾಮ ಭಜನಾ ಮಂದಿರ ರಸ್ತೆಯಿಂದಾಗಿ ಮನೆಕಡೆಗೆ ಹೋಗುತ್ತಿದ್ದ ಸುಮಾರು 64 ವರ್ಷ ಪ್ರಾಯದ ಗಣೇಶ್ ಕಾಮತ್ ಎಂಬವರನ್ನು ದೂಡಿಹಾಕಿ ಹಲ್ಲೆ ಮಾಡಿ ಅವರ ಕೈಯಲ್ಲಿದ್ದ 27 ಲಕ್ಷ ನಗದು ಹಣವಿದ್ದ ಚೀಲವನ್ನು ದರೋಡೆ ಮಾಡಿ ಬೆದರಿಕೆ ಹಾಕಿದ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಂತೆ ತನಿಖೆ ಕೈಗೊಂಡಿದ್ದ ಕೇಂದ್ರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ರೂ 16,57,000/- ನಗದು ಹಣ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 17,17,000/- ರೂ ಆಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಟಿ ಆರ್ ಸುರೇಶ್ ಐಪಿಎಸ್, ಮಾನ್ಯ ಉಪ ಪೊಲೀಸ್ ಆಯುಕ್ತರು (ಕಾ&ಸು), ಹನುಮಂತರಾಯ ಐಪಿಎಸ್ ,ಮಾನ್ಯ ಉಪ ಪೊಲೀಸ್ ಆಯುಕ್ತರು(ಅಪರಾಧ&ಸಂಚಾರ)ಶ್ರೀಮತಿ ಉಮಾ ಪ್ರಶಾಂತ, ಸಹಾಯಕ ಪೊಲೀಸ್ ಆಯುಕ್ತರು,ಕೇಂದ್ರ ಉಪ ವಿಭಾಗ,ಮಂಗಳೂರು ನಗರ ಭಾಸ್ಕರ ಒಕ್ಕಲಿಗ, ಹಾಗೂ ಕೇಂದ್ರ ಉಪ ವಿಭಾಗ ರೌಡಿ ನಿಗ್ರಹ ದಳದ ಪೊಲೀಸ್ ನಿರೀಕ್ಷಕರಾದ ರವೀಶ್ ಎಸ್ ನಾಯಕ್,ಪೊಲೀಸ್ ಉಪ ನಿರೀಕ್ಷಕರಾದ ಪ್ರದೀಪ ಟಿ ಆರ್ ಹಾಗೂ ಸಿಬ್ಬಂದಿಗಳಾದ ವೆಲೆಸ್ಟೀನ್ ಡಿ ಸೋಜಾ,ಗಂಗಾಧರ ಎನ್,ಸಂತೋಷ ಸಸಿಹಿತ್ಲು, ಕಿಶೋರ್ ಕೋಟ್ಯಾನ್, ಪ್ರಮೋದ್ ಮೇರಿಹಿಲ್,ನಾಗರಾಜ ಚಂದರಗಿ, ಬಸವರಾಜ ನಾಯ್ಕ ಮುಂತಾದವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English