ಮಂಗಳೂರು : ಪೊಲೀಸರು ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಿಗೆ ಹಠಾತ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನಿನ ತಿಳಿವಳಿಕೆ ನೀಡಬೇಕು ಆಗ ಅತ್ಯಾಚಾರದಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸುಲಭ ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಅವರು ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ದಾಖಲಾಗಿರುವ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರಲ್ಲಿ ಮಾತನಾಡಿದರು.
ಕರಾವಳಿ ಜಿಲ್ಲೆಯಲ್ಲಿ ಅತ್ಯಾಚಾರ, ಸಾಮೂಹಿಕ ಅತ್ಯಾಚಾರದಂಥ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಎಲ್ಲ ಶಾಲಾ-ಕಾಲೇಜುಗಳಿಗೆ ಕನಿಷ್ಠ ಮೂವರು ಪೊಲೀಸರು ಭೇಟಿ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಕಾನೂನಿನ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಲ್ಲದೆ ಅಪರಾಧ ಕೃತ್ಯ ಎಸಗಿದರೆ ಕಾನೂನಿನ ಬಗ್ಗೆ ಭೀತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಜಾರಿಗೊಳಿಸುವಂತೆ ಕೋರಿ ಶಿಕ್ಷಣ ಸಚಿವರಿಗೆ ಆಯೋಗದಿಂದ ಪತ್ರ ಬರೆಯುವುದಾಗಿ ನಾಗಲಕ್ಷ್ಮೀಬಾಯಿ ಹೇಳಿದರು.
ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಮೇಲೆ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ನಡೆಸಿದ ಹಿನ್ನೆಲೆ ಕಾಲೇಜಿಗೆ ಭೇಟಿ ನೀಡಿ, ಸಲಹೆ, ಸೂಚನೆಗಳನ್ನು ನೀಡಿದ್ದೇನೆ. ಕಾಲೇಜಿನಲ್ಲಿ ಸಮಿತಿಯೊಂದನ್ನು ರಚಿಸಿ, ಅತ್ಯಾಚಾರದಂತಹ ಘಟನೆಗಳ ಸಂಪೂರ್ಣ ಮಾಹಿತಿ ಕೊಡಲು ಹೇಳಿದ್ದೇನೆ. ಜತೆಗೆ, ನೊಂದ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಸಾಂತ್ವನ ನೀಡಿದ್ದೇನೆ ಎಂದರು.
ಅತ್ಯಾಚಾರ ಘಟನೆ ಬೆಳಕಿಗೆ ಬಂದ ಕೆಲವೇ ಗಂಟೆಗಳನ್ನು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಅತ್ಯಾಚಾರದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಆರೋಪಿಗಳನ್ನೂ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರು ಯಶಸ್ವಿಯಾಗಿದ್ದಾರೆ. ಪರಿಣಾಮಕಾರಿ ಚಾರ್ಚ್‌ಶೀಟ್ ಹಾಕುಲು ಪೊಲೀಸರಿಗೆ ಸೂಚನೆ ನೀಡಿದರು.
Click this button or press Ctrl+G to toggle between Kannada and English