ಮಂಗಳೂರು : ಹಿರಿಯ ತುಳು ಸಾಹಿತಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಕೆ.ಸೀತಾರಾಮ್ ಕುಲಾಲ್ (78) ಭಾನುವಾರ ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೀತಾರಾಮ್ ಕುಲಾಲ್, ತಮ್ಮ ಸ್ವ ಗೃಹದಲ್ಲಿ ನಿಧನರಾದರು.
ಇವರ ಸಾವಿನಿಂದ ತುಳು ಚಿತ್ರರಂಗ ಹಾಗೂ ತುಳು ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ.
ಸೀತಾರಾಮ್ ಕುಲಾಲ್ ಅವರು ಮೊದಲು ದಾಸಿ ಪುತ್ರ ಕನ್ನಡ ನಾಟಕದ ಮೂಲಕ ರಂಗ ಭೂಮಿ ಪ್ರವೇಶಿಸಿದರು. ಆ ನಂತರ ಪಗೆತ ಪುಗೆ ತುಳು ಚಲನ ಚಿತ್ರಕ್ಕೆ ಸಾಹಿತ್ಯ ನೀಡುವುದರೊಂದಿಗೆ ತುಳು ಚಿತ್ರರಂಗದ ಪ್ರವೇಶಿಸಿದ್ದರು.
ಬಯ್ಯಮಲ್ಲಿಗೆ ಬೊಳ್ಳಿತೋಟ ಉಡಲ್ದ ತುಡರ್ ಬದ್ಕದ ಬಿಲೆ, ಕೋಟಿ ಚೆನ್ನಯ, ಬದಿ ಸೇರಿ ಒಟ್ಟು ಹನ್ನೊಂದು ಚಿತ್ರಗಳಿಗೆ ಅವರು ಸಾಹಿತ್ಯವನ್ನು ನೀಡಿದ್ದಾರೆ. ಸುಮಾರು 17 ಕನ್ನಡ ಚಾರಿತ್ರಿಕ ನಾಟಕ, 6 ಕನ್ನಡ ಪೌರಾಣಿಕ ಸೇರಿ ಒಟ್ಟು 66 ಕೃತಿಗಳನ್ನು ರಚಿಸಿದ್ದಾರೆ. ನಟರಾಗಿ, ನಾಟಕಕಾರರಾಗಿ, ಸಾಹಿತಿಯಾಗಿ, ನಿರ್ದೇಶಕರಾಗಿ ತುಳು ರಂಗಭೂಮಿಗೆ ಹಾಗೂ ತುಳು ಚಲನ ಚಿತ್ರ ರಂಗಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಲವಾರು ಸಂಘ- ಸಂಸ್ಧೆಗಳು ಗೌರವಿಸಿದ್ದವು
ತುಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಬಲ್ಲ ಮೋಕೆದ ಸಿಂಗಾರಿ ಉಂತುದೆ ವಯ್ಯಾರಿ ಯಾನ್ ಮೂಲೆ ಕಾತೊಂದುಲ್ಲೆ ಮರತೇ ಪೋಪನಾ, ಪಕ್ಕಿಲು ಮೂಜಿ ಒಂಜೇ ಗೂಡುಡು, ಬದ್ಕೊಂದುಂಡುಗೆ, ಪರಶುರಾಮನ ಕೊಡಲಿಗ್ ಪುಟ್ಟಿನ ತುಳುನಾಡ್, ಬ್ರಹ್ಮನ ಬರವು ಮಾಜಂದೆ ಪೊಂಡಾ/ ಅಪ್ಪೆ ಮನಸ್ ಬಂಗಾರ ಅಮ್ಮ ತೆನಸು ಸಿಂಗಾರ, ಡಿಂಗಿರಿ ಮಾಮ ಡಿಂಗಿರಿ ಮಾಮ ಪೊಡಿದ್ ಪಾರಡಾ. ಹೀಗೆ ಸುಮಾರು 11 ತುಳು ಚಿತ್ರಗಳಿಗೆ 25ಕ್ಕೂ ಮಿಕ್ಕಿ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.
ಕಲಾವಿದರಾಗಿ ಕಳೆದ 45 ವರ್ಷಗಳಿಂದ ಕಲಾಸೇವೆ ಮಾಡಿದ ಇವರು ತಾವು ರಚಿಸಿರುವ ಯಾವುದೇ ಕೃತಿಗಾಗಲಿ ನಟನೆ ನಾಟಕ ಹಾಗೂ ಹಾಡುಗಳಗಾಗಲಿ ಯಾವುದೇ ರೀತಿಯ ಸಂಭಾವನೆಯನ್ನು ಪಡೆದುಕೊಳ್ಳದೆ ಸೇವೆ ಸಲ್ಲಿಸಿರುವುದು ಇವರ ಕಲಾಪ್ರೇಮಕ್ಕೆ ಸಾಕ್ಷಿಯಾಗಿದೆ.
ಇವರಿಗೆ ‘ರಂಗಕಲಾಭೂಷಣ’ ‘ತುಳು ರತ್ನ’ ‘ಪೆರ್‍ಮೆದ ತುಳುವೆ’ ‘ತುಳುಸಿರಿ’ ‘ತುಳು ಸಾಹಿತ್ಯ ರತ್ನಾಕರ’ ‘ತೌಳವ ಪ್ರಶಸ್ತಿ’ ಇತ್ಯಾದಿ ಹಲವಾರು ಪ್ರಶಸ್ತಿಗಳು ಲಭಿಸಿದೆ.
Click this button or press Ctrl+G to toggle between Kannada and English