ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಆಕರ್ಷಕ ವಸ್ತು ಪ್ರದರ್ಶನ

10:48 AM, Monday, February 24th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

vastu-pradarshana

ಮಡಿಕೇರಿ : ಅರೆಭಾಷೆ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಮತ್ತು ವಿಚಾರ ಮಂಡನೆಗಳ ಜೊತೆಗೆ ವೇದಿಕೆಯ ಮತ್ತೊಂದು ಬದಿಯಲ್ಲಿ ಸ್ಥಾಪಿತವಾಗಿದ್ದ ವಸ್ತು ಪ್ರದರ್ಶನ ಮಳಿಗೆಗಳು ಸಾಹಿತಿಗಳು, ಮಕ್ಕಳು, ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯುವಲ್ಲಿ ಯಶಸ್ವಿಯಾಯಿತು.

ನೂರಾರು ವರ್ಷಗಳ ಇತಿಹಾಸವಿರುವ ಅರೆಭಾಷೆ ಮಾತನಾಡುವ ಜನಾಂಗದವರು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಅನೇಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದರ ಜೊತೆಗೆ ಪುಸ್ತಕ ಪ್ರೇಮಿಗಳಿಗಾಗಿ ಪುಸ್ತಕ ಮಳಿಗೆ, ಚಿತ್ರಕಲೆ, ಅನ್ವಯಿಕ ಕಲೆಗಳಲ್ಲಿ ಆಸಕ್ತಿ ಹೊಂದಿದವರಿಗಾಗಿ ಮಂಗಳೂರಿನ ಮಹಾಲಸ ಕಾಲೇಜ್ ಆಫ್ ವಿಶ್ಯುವಲ್ ಆರ್ಟ್ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು.

vastu-pradarshana

ಮುಖ್ಯವಾಗಿ ಹಿತ್ಲುಗದ್ದೆ ಗ್ರಾಮಸ್ಥರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಧ್ಯಾಪಕರಾದ ಸುಬ್ರಹ್ಮಣ್ಯ ಕೆ.ಜಿ ವಿಟ್ಲ ಅವರು ಕದಿಕೆ ಪಾರಂಪರಿಕ ವಸ್ತು ಸಂಗ್ರಹಾಲಯದ ವತಿಯಿಂದ ಸಂಗ್ರಹಿಸಿದ್ದ ನೂರಿನ್ನೂರು ವರ್ಷಗಳ ಇತಿಹಾಸವಿರುವ ಸಾಂಪ್ರದಾಯಿಕ ವಸ್ತುಗಳ ಪ್ರದರ್ಶನ ಹಲವರನ್ನು ಪುಳಕಿತರನ್ನಾಗಿ ಮಾಡಿತು.

ಬಹುಮುಖ್ಯವಾಗಿ ವಿವಿಧ ರೀತಿಯ ಮೀನು ಹಿಡಿಯುವ ಸಾಧನಗಳಾದ ಕೊಂಜೊಳು, ಕುತ್ತುಕೂಳಿ ಮುಂತಾದವುಗಳು ಬಹು ವೈವಿಧ್ಯತೆಯಿಂದ ಕೂಡಿದ್ದವು. ಮೀನು ಕೊಯ್ಯುವ ಹಳೆಯ ಕಾಲದ ಕತ್ತಿ, ಕೊರಂಬೆ, ಪುತ್ತರಿ ಪಟ್ಟೆ, ಓನಲೆ, ಪರೆ, ಮಣ್ಣಿನ ಹೂಜಿ, ಮೊರ, ಮರಾಯಿ, ನೊಗ-ನೇಗಿಲುಗಳು ನೋಡುಗರನ್ನು ಆಕರ್ಷಿಸಿದವು. ಆಧುನಿಕತೆಯ ಪರಿವಿಲ್ಲದ ಕಾಲದಲ್ಲಿ ಜಾಣ್ಮೆಯಿಂದ ಬಿದಿರು, ಕಬ್ಬಿಣ, ತಾಮ್ರ ಮತ್ತು ಮಣ್ಣಿನಿಂದ ಹಿರಿಯರು ಕ್ರಿಯಾತ್ಮಕವಾಗಿ ರಚಿಸಿದ ವಸ್ತುಗಳು ಮಕ್ಕಳ ಮನಸ್ಸಿಗೆ ಮುದ ನೀಡಿದವು.

vastu-pradarshana

ಈಗಿನ ಆಧುನಿಕ ತೂಕ ಮತ್ತು ಅಳತೆಯ ಮಾನಗಳ ಸಮಕ್ಕೆ ನಿಲ್ಲುವ ಸುಂದರವಾದ ಪುರಾತನ ಅಳತೆಯ ಮಾನಗಳಾದ ಸೇರು, ಪಾವು ಮತ್ತು ತೂಕದ ಕಲ್ಲುಗಳೂ ಸಹ ತಮ್ಮ ಇತಿಹಾಸವನ್ನು ನೋಡುಗರಿಗೆ ಕೂಗಿ ಹೇಳುತ್ತಿದ್ದವು. ವಿದ್ಯುತ್ ದೀಪಗಳ ಕಾಲದಲ್ಲಿ ಮರೆಯಾಗಿ ಮೂಲೆ ಸೇರಿದ್ದ ಹಳೆಯ ಕಾಲದ ಚೆಲುವಾದ ಲಾಟೀನು ಮತ್ತು ಎಣ್ಣೆಯ ದೀಪಗಳೂ ಸಹ ಸಿಂಗಾರಗೊಂಡು ಕತ್ತಲೆಯ ಕಾಲದಲ್ಲಿ ನಿಮ್ಮ ಪೂರ್ವಜರಿಗೆ ಬೆಳಕಾಗಿದ್ದವರು ನಾವೆ ಎಂದು ಗರ್ವದಿಂದಲೇ ನುಡಿಯುತ್ತಿದ್ದವು. ಅಕ್ಕ-ಪಕ್ಕದಲ್ಲಿ ಸಾಗುತ್ತಿದ್ದ ಮಕ್ಕಳು, ಯುವಕರು ಈ ಪುರಾತನ ವಸ್ತುಗಳನ್ನು ಕಂಡು ಸಂತಸ ವ್ಯಕ್ತಪಡಿಸಿದರು.

ಇವೆಲ್ಲದರ ಜೊತೆಗೆ ಹಿಂದಿನ ಕಾಲದಲ್ಲಿ ಮಗುವನ್ನು ಮಲಗಿಸಲು ಬಳಸುತ್ತಿದ್ದ ಬೆತ್ತದ ತೊಟ್ಟಿಲು ಮತ್ತು ಚೈನುಗಳು ತನ್ನೊಳಗೆ ಜೋಗುಳವ ಹಾಡುತ ಬಂದವರಿಗೆ ತನ್ನ ವಿಚಾರಗಳ ತಿಳಿಸುವಂತೆ ಪ್ರದರ್ಶನದಲ್ಲಿ ಕಂಗೊಳಿಸುತ್ತಿತ್ತು. ಇದರೊಂದಿಗೆ ಅವಲಕ್ಕಿಯನ್ನು ಕುಟ್ಟುವ ದೊಡ್ಡದಾದ ಮರದ ಸಾಧನ, ಭೂಮಿಯ ಉಳುಮೆಗಾಗಿ ಬಳಸುತ್ತಿದ್ದ ನೊಗ ಮತ್ತು ನೇಗಿಲು, ಮುಡಿಕುತ್ತು, ವಿವಿಧ ಬಗೆಯ ಆಭರಣಗಳನ್ನು ಇಡಲು ಬಳಸುತ್ತಿದ್ದ ಸಾಂಪ್ರದಾಯಿಕ ಶೈಲಿಯ ಕೆತ್ತನೆಗಳುಳ್ಳ ಆಭರಣ ಪೆಟ್ಟಿಗೆಗಳು ಆಕರ್ಷಣೀಯ ಕೇಂದ್ರ ಬಿಂದುಗಳಾಗಿದ್ದವು. ಜೊತೆಗೆ ಬಾವಿಯಿಂದ ನೀರು ಸೇದಲು ಬಳಸುತ್ತಿದ್ದ ರಾಟೆ ಹಾಗು ಹಗ್ಗ ವಸ್ತುಪ್ರದರ್ಶನದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದವು.

vastu-pradarshana

ಅರೆಭಾಷೆ ಗೌಡ ಸಮುದಾಯದಲ್ಲಿ ಐನ್‌ಮನೆ ಎಂದರೆ ಅದಕ್ಕೆ ತನ್ನದೇ ಆದ ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆಗಳಿವೆ. ಅಂತೆಯೇ ಕಲಾವಿದನ ಕೈಚಳಕದಲ್ಲಿ ಹುಲ್ಲು ಹಾಸಿನಿಂದ ನಿರ್ಮಿತವಾಗಿದ್ದ ಹಿತ್ಲುಗದ್ದೆ ಗ್ರಾಮದವರ ಐನ್‌ಮನೆ ಆಕರ್ಷಕವಾಗಿತ್ತು.

ಜೊತೆಗೆ ಹಿಂದೆ ಆಟವಾಡುತ್ತಿದ್ದ ಚೆನ್ನೆಮಣೆ ಆಟದ ಸಾಧನಗಳು ಮತ್ತು ಹಲವಾರು ಸಾಂಪ್ರದಾಯಿಕ ಮತ್ತು ಪುರಾತನ ವಸ್ತುಗಳು ಒಂದಷ್ಟು ಹೊತ್ತು ನೋಡುಗರನ್ನು ಶತಮಾನಗಳ ಹಿಂದಕ್ಕೆ ಕೊಂಡೊಯ್ದು ಪುಳಕಿತರನ್ನಾಗಿಸಿತು.

ಮತ್ತೊಂದೆಡೆ ಪುಸ್ತಕ ಪ್ರೇಮಿಗಳಿಗಾಗಿಯೇ ನಿರ್ಮಾಣವಾಗಿದ್ದ ಪುಸ್ತಕ ಮಳಿಗೆಯಲ್ಲಿ ಎನ್.ಜಿ.ಕಾವೇರಮ್ಮ ಅವರು ಬರೆದಿರುವ ಅರೆಭಾಷೆ ಕಾದಂಬರಿ ಪುಂಸ್ತ್ರೀ [ಮೂಲ ಲೇಖಕರು ಡಾ. ಪ್ರಭಾಕರ ಶಿಶಿಲ], ಸಂಗೀತ ರವಿರಾಜ್ ಅವರು ಬರೆದಿರುವ ಕಲ್ಯಾಣ ಸ್ವಾಮಿ [ಮೂಲ ಲೇಖಕರು ನಿರಂಜನ], ಕಟ್ರತನ ಲಲಿತಾ ಅಯ್ಯಣ್ಣ ಅವರು ಬರೆದಿರುವ ಅರೆಭಾಷೆ ಕಥಾ ಸಂಕಲನ ಅಪೂರ್ವ ಸಂಗಮ ಸೇರಿದಂತೆ ಇನ್ನಿತರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಸುಂದರವಾಗಿತ್ತು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರ ಆಶಯದಂತೆ ಕಲಾಕ್ಷೇತ್ರದಲ್ಲಿ ಅರೆಭಾಷಿಗರನ್ನು ಹೆಚ್ಚು ಪ್ರೋತ್ಸಾಹಿಸಲು ಮಂಗಳೂರಿನ ಮಹಾಲಸ ಕಾಲೇಜ್ ಆಫ್ ವಿಶ್ಯುವಲ್ ಆರ್ಟ್ ವತಿಯಿಂದ ಮಳಿಗೆಗಳನ್ನು ತೆರೆಯಲಾಗಿತ್ತು. ಚಿತ್ರಕಲೆ, ಅನ್ವಯಿಕ ಕಲೆ ಸೇರಿದಂತೆ ಇತರ ವಿಚಾರಗಳಲ್ಲಿ ಯುವ ವರ್ಗವನ್ನು ಆಕರ್ಷಿಸುವುದು ಈ ಮಳಿಗೆಯ ಮುಖ್ಯ ಉದ್ದೇಶವಾಗಿತ್ತು.

ಒಟ್ಟಾರೆ ಅರೆಭಾಷೆ ಸಾಹಿತ್ಯ ಸಮ್ಮೇಳನವು ತನ್ನ ಭಾಷಾ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪುರಾತನ ವಸ್ತುಗಳ ಬಗ್ಗೆ ಮಾಹಿತಿ, ಪುಸ್ತಕ ಪ್ರದರ್ಶನಗಳೊಂದಿಗೆ ಕಲಾಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English