ಮಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ.ರವಿಯವರ ಮಾರ್ಗದರ್ಶನ ದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 100 ಅರ್ಹ ಕವಿ, ಸಾಹಿತಿ ಹಾಗೂ ಕಲಾವಿದರ ಕುಟುಂಬಕ್ಕೆ ರೂ.1300.00 ಮೌಲ್ಯದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ಟು ಗಳನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಾಂಕೇತಿಕವಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಸಚಿವರು ಮಾತನಾಡುತ್ತ ಕೊರೋನಾ ಸಮಸ್ಯೆಯಿಂದ ಉಂಟಾದ ಲಾಕ್ ಡೌನ್ ಈ ಸಂದರ್ಭದಲ್ಲಿ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಮನೆ ಮನೆ ತೆರಳಿ ಆಹಾರ ಕಿಟ್ಟು ಗಳನ್ನು ನೀಡುತ್ತಿರುವ ಅಕಾಡೆಮಿಯ ಸೇವೆ ಶ್ಲಾಘನೀಯ ಎಂದರು ಹಾಗೂ ಉಳಿದ ಎಲ್ಲಾ ಅಕಡೆಮಿ, ನಿಗಮ, ಪ್ರಾಧಿಕಾರಗಳು ಕೂಡ ಅವರವರ ವ್ಯಾಪ್ತಿಗೆ ಬರುವ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಇಂತಹ ಕಾರ್ಯಕ್ರಮಗಳನ್ನು ಎಲ್ಲಾ ಕಡೆ ಹಮ್ಮಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು ರವರು ಕಿಟ್ ವಿತರಿಸಿ ಮಾತನಾಡುತ್ತಾ ಕೇವಲ ಕಾಟಾಚಾರಕ್ಕೆ ಆಹಾರ ಕಿಟ್ ವಿತರಿಸದೆ ಒಂದು ಸಣ್ಣ ಕುಟುಂಬವು ಒಂದು ತಿಂಗಳಿಗೆ ಉಪಯೋಗಿಸಲು ಅನುಕೂಲವಾಗುವಂತೆ ಗುಣಮಟ್ಟದ ಆಹಾರವನ್ನು ಪೂರೈಸುತ್ತಿರುವ ಅಕಾಡೆಮಿಯ ಕಾರ್ಯವನ್ನು ಶ್ಲಾಘಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀ ದಿವಾಕರ್ ಪಾಂಡೇಶ್ವರವರು ಮಾತನಾಡಿ ಅರ್ಹ ಕುಟುಂಬಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಬ್ಯಾರಿ ಅಕಾಡೆಮಿಯು ಮಾಡುತ್ತಿರುವ ಈ ಕಾರ್ಯಕ್ರಮ ಎಲ್ಲಾ ಕಾರ್ಯಕ್ರಮಗಳಿಗಿಂತಲು ಅತ್ಯಂತ ಶ್ರೇಷ್ಠವಾಗಿದ್ದು, ಬ್ಯಾರಿ ಅಕಾಡೆಮಿಯು ಇಂತಹ ಸಾಮಾಜಿಕ ಕಾರ್ಯಕ್ರಮವನ್ನು ಮಾಡುವ ಮೂಲಕ ತಾವು ಇತರರಿಗಿಂತ ಭಿನ್ನವೆಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಉಳಿದ ಅಕಾಡೆಮಿಗಳು ಕೂಡ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೇಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರಹೀಂ ಉಚ್ಚಿಲ್ ರವರು ಮಾತನಾಡಿ ಕವಿ, ಸಾಹಿತಿ ಮತ್ತು ಕಲಾವಿದರು ಕಷ್ಟಗಳಿಂದ ದೂರವಾಗಿ ಸಂತೃಪ್ತಿಯಿಂದ ಇದ್ದರೆ ಮಾತ್ರ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಜೀವಂತವಾಗಿರಲು ಸಾದ್ಯ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ಸಾಹಿತಿ ಕಲಾವಿದರಿಗೆ ಯಾವುದೇ ಆದಾಯ ಇರುವುದಿಲ್ಲ ಹಾಗೆಯೇ ಸಾಂಸ್ಕೃತಿಕ ಲೋಕದ ವ್ಯಕ್ತಿಗಳು ಯಾವತ್ತು ಯಾರ ಮುಂದೆಯು ಕೈಚಾಚದೆ ಸ್ವಾಭಿಮಾನದಿಂದ ಬದುಕುವವರು, ಇಂತವರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಈ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆಯನ್ನು ಮಾಡುವ ಅವಕಾಶ ಒದಗಿರುವುದು ನಮ್ಮ ಸೌಬಾಗ್ಯ ಎಂದು ಅಭಿಪ್ರಾಯ ಪಟ್ಟರು.
ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿ ಅಕಾಡೆಮಿಯ ಸದಸ್ಯರಾದ ಶ್ರೀ ಅಬ್ದುಲ್ ರಝಾಕ್ ಸಾಲ್ಮರ ನಿರೂಪಿಸಿ ವಂದಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಮುರಳಿರಾಜ್ ಹಾಗೂ ರೂಪೇಶ್, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾದ ರಾಶ್ ಬ್ಯಾರಿ, ಮುನ್ನ ಕಮ್ಮರಡಿ, ಸಿದ್ದಿಕ್ ಮಂಜೇಶ್ವರ, ಫಾರೂಕ್ ಆತೂರು, ಇಮ್ರಾನ್ ಉಪ್ಪಿನಂಗಡಿ, ಖಾಲಿದ್ ನಂದಾವರ, ಅಝೀಝ್ ಲೊರಟ್ಟೊಪದವು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English