ಮಂಗಳೂರು : ಬಜರಂಗದಳದ ಮಾಜಿ ಮುಖಂಡ, ಖ್ಯಾತ ಸಾಮಾಜಿಕ ಕಾರ್ಯಕರ್ತ, ಪ್ರಖರ ವಾಗ್ಮಿ ಮಹೇಂದ್ರ ಕುಮಾರ್ (47) ಶನಿವಾರ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಹೇಂದ್ರ ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ತಕ್ಷಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ವಿಧಿವಶರಾಗಿದ್ದಾರೆ. ಇವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮಹೇಂದ್ರ ಕುಮಾರ್ ಮೂಲತಃ ಚಿಕ್ಕಮಗಳೂರಿನ ಕೊಪ್ಪದವರಾಗಿದ್ದು, ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು ಭಜರಂಗದಳ ಸಂಘಟನೆ ಮಾಜಿ ರಾಜ್ಯ ಸಂಚಾಲಕರಾಗಿದ್ದರು. ಸಂಘಟನೆಯಿಂದ ಹೊರ ಬಂದ ಬಳಿಕ ಸಾಮಾಜಿಕ ಮತ್ತು ಜಾಗೃತಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಬಿಜೆಪಿ, ಸಂಘ ಪರಿವಾರದ ಸಿದ್ಧಾಂತ ವಿರೋಧಿಸಿ ಸಾಕಷ್ಟು ನಿಷ್ಠುರಗಳನ್ನೂ ಕಟ್ಟಿಕೊಂಡಿದ್ದರು.
ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಸಿಎಎ, ಎನ್‍ಸಿಆರ್ ಕಾಯ್ದೆ ವಿರುದ್ಧವೂ ಹಲವು ಪ್ರತಿಭಟನಾ ಸಮಾವೇಶಗಳಲ್ಲಿ ಪಾಲ್ಕೊಂಡಿದ್ದರು. ಇವರು ತಮ್ಮ ದಿಟ್ಟ ಮಾತುಗಳಿಂದಲೇ ರಾಜ್ಯದಾದ್ಯಂತ ಅಪಾರ ಜನರ ಮನ್ನಣೆ ಪಡೆದುಕೊಂಡಿದ್ದರು.
“ನಮ್ಮ ಧ್ವನಿ” ಎಂಬ ಸಂಘಟನೆ ಸಂಸ್ಥಾಪಕರಾಗಿದ್ದ ಅವರು ನಮ್ಮ ಧ್ವನಿ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನಪ್ರಿಯರಾಗಿದ್ದರು.
ಸಿಎಂ ಯಡಿಯೂರಪ್ಪ ಅವರು ಮಹೇಂದ್ರ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ. ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಗತಿಪರ ಚಿಂತಕ ಮಹೇಂದ್ರ ಕುಮಾರ್ ಅವರ ಅಗಲಿಕೆ ನೋವು ತಂದಿದೆ.
ಬಜರಂಗದಳದ ಮಾಜಿ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಹಿತೈಷಿಗಳಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.— B.S. Yediyurappa (@BSYBJP) April 25, 2020
Click this button or press Ctrl+G to toggle between Kannada and English