ಮಂಗಳೂರು : ಸಂಸದ ನಳಿನ್‌ಕುಮಾರ್‌ ರಿಂದ 20 ಸಾವಿರ ಕಿಟ್ ವಿತರಣೆ

7:53 PM, Sunday, April 26th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Nalin-Kitಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 20 ಸಾವಿರ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಭಾನುವಾರ ನಗರದ ಕದ್ರಿ ಮೈದಾನದಲ್ಲಿ ಬಿಜೆಪಿ ಶಾಸಕರು ಹಾಗೂ ಮಂಡಲ ಸಮಿತಿ ಅಧ್ಯಕ್ಷರುಗಳಿಗೆ ಹಸ್ತಾಂತರಿಸಲಾಯಿತು.

ಕಿಟ್ ಹಸ್ತಾಂತರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ “ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದವರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬಡ ಜನತೆಯ ನೆರವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳಿಗೆ ೨೦ ಸಾವಿರ ಕಿಟ್ ನೀಡಲಾಗಿದ್ದು, ಶಾಸಕರು ಹಾಗೂ ಬಿಜೆಪಿ ಪ್ರಮುಖರು ಆಯಾ ಕ್ಷೇತ್ರದಲ್ಲಿ ಬಡವರನ್ನು ಗುರುತಿಸಿ ವಿತರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಿಟ್ ಒದಗಿಸಲು ಪ್ರಯತ್ನಿಸುತ್ತೇನೆ’ಎಂದರು.

ವಾರ್‌ರೂಂನಿಂದ ಸ್ಪಂದನೆ :
ಲಾಕ್‌ಡೌನ್ ಘೋಷಣೆಯಾದ ದಿನದಿಂದ ಸಂಸದರ ಕಚೇರಿಯಲ್ಲಿ ವಾರ್ ರೂಂ ತೆರೆದು ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಡೆದಿದೆ. ಜಿಲ್ಲೆಯ ಬಿಜೆಪಿ ಶಾಸಕರು ಆಯಾ ಕ್ಷೇತ್ರದಲ್ಲಿ ವಾರ್ ರೂಂ ತೆರೆದಿದ್ದು, ಕಳೆದ ಒಂದು ತಿಂಗಳಲ್ಲಿ ಎಲ್ಲ ವಾರ್ ರೂಂಗಳ ಮೂಲಕ 2.60 ಲಕ್ಷ ಆಹಾರದ ಪೊಟ್ಟಣ ಹಾಗೂ 1.78 ಲಕ್ಷ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. 51 ಸಾವಿರ ಮಾಸ್ಕ್ ವಿತರಿಸಲಾಗಿದೆ. ಜನತೆ ಯಾವುದೇ ಕಾರಣಕ್ಕೂ ಧೃತಿಗೆಡದೆ ಸೋಂಕು ನಿವಾರಣೆ ಹೋರಾಟಕ್ಕೆ ಸಹಕರಿಸಬೇಕು ಎಂದು ಸಂಸದರು ವಿನಂತಿಸಿದರು.

2.79  ಲಕ್ಷ ಕುಟುಂಬಗಳಿಗೆ ಅಕ್ಕಿ :
ಕಿಟ್ ವಿತರಣೆಗೆ ಚಾಲನೆ ನೀಡಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ “ದ.ಕ.ಜಿಲ್ಲೆಯ 2.79 ಲಕ್ಷ ಕುಟುಂಬಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ 10 ೦ ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗಿದೆ. ಸಂಸದ ನಳಿನ್ ಕುಮಾರ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿದ 20  ಸಾವಿರ ಕಿಟ್‌ಗಳನ್ನು ಕಡು ಬಡತನದ ಕುಟುಂಬಗಳಿಗೆ ಆಯಾ ಕ್ಷೇತ್ರದ ಶಾಸಕರು ಹಂಚಲಿದ್ದಾರೆ ಎಂದರು.

ಶಾಸಕರುಗಳಾದ ಸಂಜೀವ ಮಠಂದೂರು, ಎಸ್.ಅಂಗಾರ, ಉಮಾನಾಥ್ ಕೋಟ್ಯಾನ್, ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜಾ, ಮೇಯರ್ ದಿವಾಕರ ಪಾಂಡೇಶ್ವರ, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಯುವ ಮೋರ್ಚಾ ಅಧ್ಯಕ್ಷ ಸಂದೇಶ್ ಶೆಟ್ಟಿ, ಮಾಜಿ ಶಾಸಕ ಯೋಗೀಶ್ ಭಟ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ಹರಿಕೃಷ್ಣ ಬಂಟ್ವಾಳ್, ಸಂತೋಷ್ ಕುಮಾರ್ ರೈ ಬೋಳಿಯಾರ್, ನಿತಿನ್ ಕುಮಾರ್, ಹರೀಶ್ ಕಂಜಿಪಿಲಿ, ವಿಜಯಕುಮಾರ್ ಶೆಟ್ಟಿ, ಕದ್ರಿ ಮನೋಹರ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Nalin-Kit

Nalin-Kit

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English