ಮಂಗಳೂರು :ಇದು ತೀರಾ ಸಾಮಾನ್ಯವಾದ ಪ್ರಕರಣವಲ್ಲ. ಒಂದೇ ಮನೆಯಲ್ಲಿ ನಾಲ್ಕು ಮೃತದೇಹಗಳು ಬಿದ್ದುಕೊಂಡಿರುವುದು ಜತೆಗೆ ಮನೆ ಮಾಲೀಕ ತಲೆ ತಪ್ಪಿಸಿಕೊಂಡಿರುವುದು ಎಲ್ಲವೂ ಇಡೀ ಜಿಲ್ಲೆಯ ಜನರಲ್ಲಿ ಸಾವಿರಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ಜತೆಗೆ ಪೊಲೀಸ್ ಇಲಾಖೆನೂ ಕೂಡ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿತ್ತು. ಈಗ ಮನೆ ಮಾಲೀಕರ ತಲೆ ಬರುಡೆ ಸೇರಿದಂತೆ ಅವರ ಆತ್ಮಹತ್ಯೆಗಳ ಕುರುಹುಗಳು ಪತ್ತೆಯಾಗುವ ಮೂಲಕ ಎದ್ದು ನಿಂತು ಕೊಂಡು ಪ್ರತಿಯೊಬ್ಬರು ಕೇಳುವ ಪ್ರಶ್ನೆ ಒಂದೇ ಅಷ್ಟಕ್ಕೂ ಕೊಲೆಗಾರ ಯಾರು ಸ್ವಾಮಿ..? ಆದರೆ ಉತ್ತರ ಮಾತ್ರ ಗೊತ್ತಿಲ್ಲ. ಬನ್ನಿ ಏನ್ ವಿಚಾರ ಕೇಳೋಣ….
ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಎಂಬಲ್ಲಿ ಐದು ತಿಂಗಳ ಹಿಂದೆ ಪತ್ನಿ ಮತ್ತು ತನ್ನ ಮೂವರು ಮಕ್ಕಳನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಮನೆಯ ಯಜಮಾನನ ತಲೆ ಬುರುಡೆ ಮತ್ತು ಅಸ್ಥಿಯ ಅವಶೇಷಗಳು ಅವರ ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕುರುಹುಗಳೊಂದಿಗೆ ಪತ್ತೆಯಾಗಿದೆ.ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕಕ್ಕೂರು ನಿವಾಸಿ ವೆಂಕಟ್ರಮಣ ಭಟ್ ಅವರು ಕಳೆದ ಜುಲೈ 12 ರಂದು ಮುಂಜಾನೆಯ ವೇಳೆ ಪತ್ನಿಯಾಗಿರುವ ಶಿಕ್ಷಕಿ ಸಂಧ್ಯಾ.ವಿ.ಭಟ್ (45) ತನ್ನ ಮಕ್ಕಳಾದ ವೇದ್ಯ (18), ಹರಿಗೋವಿಂದ ಶರ್ಮ (15) ಮತ್ತು ವಿನುತಾ (12) ಅವರನ್ನು ಬರ್ಬ ರವಾಗಿ ಕೊಲೆಗೈದು ಪರಾರಿಯಾಗಿದ್ದರು. ಎರಡು ದಿನಗಳ ಬಳಿಕ ವಿದ್ಯುತ್ ಮೀಟರ್ ರೀಡರ್ ಪದ್ಮನಾಭ ಎಂಬವರು ವಿದ್ಯುತ್ ಬಿಲ್ ರೀಡಿಂಗ್ಗಾಗಿ ಭಟ್ಟರ ಮನೆಗೆ ತೆರಳಿದ್ದರು. ಭಟ್ಟರ ಮನೆಯಲ್ಲಿನ ವಿದ್ಯುತ್ ಮೀಟರ್ ಮನೆಯೊಳಗಿದ್ದು, ಈ ಹಿನ್ನೆಲೆಯಲ್ಲಿ ಅವರು ಮನೆಯ ಬಾಗಿಲು ತೆಗೆದು ನೋಡಿದಾಗ ಮನೆಯೊಳಗಿನ ಚಾವಡಿಯಲ್ಲಿ ಶವಗಳು ಪತ್ತೆಯಾಗಿದ್ದವು. ಇದರೊಂದಿಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಸಂಪ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಭಟ್ಟರ ಪತ್ತೆಗಾಗಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿ ವ್ಯಾಪಕ ಹುಡುಕಾಟ ನಡೆಸಿದ್ದರೂ ಭಟ್ಟರ ಪತ್ತೆಯಾಗಿರಲಿಲ್ಲ. ತಿಂಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಬಳಿಕ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದರು. ಇದೀಗ ಭಟ್ಟರ ತಲೆ ಬುರುಡೆ ಮತ್ತು ಕೈಕಾಲಿನ ಎಲುಬು ಮೂಳೆಗಳು ಅವರ ಮನೆಯಿಂದ ಸುಮಾರು 300 ಮೀಟರ್ ದೂರದ ಅವರ ಕುಮ್ಕಿ ಜಾಗದಲ್ಲಿರುವ ಕಾಡು ಪ್ರದೇಶದಲ್ಲಿ ಪತ್ತೆಯಾಗಿದೆ. ಇದರೊಂದಿಗೆ ಕೂತೂಹಲಕಾರಿಯಾಗಿದ್ದ ಈ ಪ್ರಕರಣಕ್ಕೆ ತೆರೆ ಬಿದ್ದಿದೆ.
ಕಕ್ಕೂರು ನಿವಾಸಿ ಕೃಷ್ಣ ನಾಯ್ಕ ಮತ್ತಿತರರು ಮಂಗಳವಾರ ಕಟ್ಟಿಗೆ ತರಲೆಂದು ಕಕ್ಕೂರಿನ ವೆಂಕಟ್ರಮಣ ಭಟ್ಟರಿಗೆ ಸೇರಿದ ಕುಮ್ಕಿ ಜಾಗದಲ್ಲಿರುವ ಅರಣ್ಯ ಪ್ರದೇಶಕ್ಕೆ ತೆರಳಿದ್ದ ವೇಳೆ ಮನುಷ್ಯನ ತಲೆಬುರುಡೆ, ಅಸ್ಥಿಯ ಅವಶೇಷಗಳು ಪತ್ತೆಯಾಗಿತ್ತು. ಈ ಕುರಿತು ಅವರು ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಂಪ್ಯ ಪೊಲೀಸರು ಅಲ್ಲಿಗೆ ತೆರಳಿ ಶೋಧ ನಡೆಸಿದಾಗ ಮನುಷ್ಯನ ತಲೆ ಬುರುಡೆ, ಕೈಕಾಲಿನ ಮೂಳೆಗಳು, ಬಟ್ಟೆಯ ತುಂಡುಗಳು, ಸಿಫಾನ್ ಮತ್ತು ವಿಷದ ಬಾಟ್ಲಿಯೊಂದು ಲಭಿಸಿದೆ. ಮರವೊಂದನ್ನೇರಿ ನೈಲಾನ್ ಹಗ್ಗದ ಸಹಾಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕುರುಹುಗಳು ಅಲ್ಲಿ ಲಭಿಸಿದ್ದು, ಅದೇ ಮರಕ್ಕೆ ಕತ್ತಿಯೊಂದನ್ನು ಕಡಿದಿಟ್ಟಿರುವುದು ಕಂಡು ಬಂದಿದೆ.
ಬಟ್ಟೆ ತುಂಡುಗಳು ಮತ್ತು ಕನ್ನಡಕ ವೆಂಕಟ್ರಮಣ ಭಟ್ ಅವರದ್ದಾಗಿದೆ ಎಂಬ ಮಾಹಿತಿ ಲಭಿಸಿದ್ದು, ವೆಂಕಟ್ರಮಣ ಭಟ್ ಅವರು ಪತ್ನಿ ಮಕ್ಕಳನ್ನು ಕೊಲೆಗೈದ ಬಳಿಕ ಅಲ್ಲಿಗೆ ತೆರಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ದೇಹದ ಭಾಗ ಸಂಪೂರ್ಣ ಕೊಳೆತು ಹೋಗಿದ್ದು, ಬಹುತೇಕ ಭಾಗಗಳು ನಾಶವಾಗಿವೆ. ಪೊಲೀಸರು ಅಲ್ಲಿ ದೊರೆತ ಮಾನವ ದೇಹದ ಅವಶೇಷ ಮತ್ತು ತಲೆ ಬುರುಡೆಯನ್ನು ವಶಕ್ಕೆ ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ, ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಅದು ವೆಂಕಟ್ರಮಣ ಭಟ್ ಅವರದ್ದೆಂದು ದೃಢ ಪಡಿಸಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಕಕ್ಕೂರು ವೆಂಕಟ್ರಮಣ ಭಟ್ ಅವರ ಮನೆಯಲ್ಲಿ ಈ ಘಟನೆಗೆ ಎರಡು ವಾರಗಳ ಹಿಂದೆ ಮನೆ ದರೋಡೆ ನಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸರಿಗೆ ಭಟ್ಟರು ದೂರು ನೀಡಿದ್ದರು. ಆದರೆ ಆ ನಂತರದ ಬೆಳವಣಿಗೆಯಲ್ಲಿ ಭಟ್ಟರೇ ಮನೆ ದರೋಡೆಯ ಕಟ್ಟು ಕತೆ ಸೃಷ್ಠಿಸಿದ್ದಾರೆ ಎಂಬ ಅಪಪ್ರಚಾರವೂ ನಡೆದಿತ್ತು. ಪೊಲೀಸರೂ ಆ ನಿಟ್ಟಿನಲ್ಲಿ ಭಟ್ಟರನ್ನು ಮತ್ತು ಅವರ ಮನೆಯವರನ್ನು ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಆ ಬಳಿಕ ನಡೆದ ಪತ್ನಿ ಮಕ್ಕಳ ಕೊಲೆ ಪ್ರಕರಣವು ಕುತೂಹಲ ಕೆರಳಿಸಿತ್ತು. ಮಾತ್ರವಲ್ಲದೆ ಪತ್ನಿ ಮಕ್ಕಳ ಕೊಲೆಯೊಂದಿಗೆ ಮನೆ ದರೋಡೆ ನಾಟಕ ಎಂಬುವುದಕ್ಕೆ ಹೆಚ್ಚಿನ ಪುಷ್ಠಿ ಲಭಿಸಿದ್ದರೂ ಇತ್ತೀಚೆಗಷ್ಟೇ ಕಕ್ಕೂರು ಮನೆ ದರೋಡೆಗೈದ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಮನೆ ದರೋಡೆ ಘಟನೆಯು ಸತ್ಯ ಎಂಬುವುದು ಸ್ಪಷ್ಟವಾಗಿತ್ತು. ಮನೆ ದರೋಡೆ ಪ್ರಕರಣ ಮತ್ತು ಆ ಬಳಿಕ ಎದ್ದ ಅಪಪ್ರಚಾರ ಹಾಗೂ ಪೊಲೀಸರ ತನಿಖೆಯಿಂದ ಬೇಸತ್ತು ವೆಂಕಟ್ರಮಣ ಭಟ್ ಅವರು ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗುತ್ತಿದೆ.
ಭಟ್ಟರ ಸಾವಿನೊಂದಿಗೆ ದರೋಡೆಯ ಹಿಂದಿನ ರಹಸ್ಯವೂ ಸತ್ತು ಹೋದಂತಾಗಿದೆ. ಯಾವುದೋ ಅಮೂಲ್ಯ ವಸ್ತುವನ್ನು ಮಾರಾಟ ಮಾಡಲು ದರೋಡೆ ತಂಡದ ಸದಸ್ಯರನ್ನು ಭಟ್ಟರೆ ಮನೆಗೆ ಕರೆದಿದ್ದರು. ವ್ಯವಹಾರ ವಿಫಲವಾದಾಗ ದರೋಡೆ ನಡೆದಿದೆ. ಅಮೂಲ್ಯ ವಸ್ತುವಿನ ರಹಸ್ಯ ಮಡದಿ ಮಕ್ಕಳು ಬಾಯಿ ಬಿಡುವ ಭಯದಿಂದ ಭಟ್ಟರು ಅವರ ಕೊಲೆ ನಡೆಸಿರುವ ಸಾಧ್ಯತೆ ಇದೆ. ಬಳಿಕ ಭಟ್ಟರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಭಟ್ಟರ ಮನೆಯಲ್ಲಿ ನಡೆದ ದರೋಡೆಯ ವಿಷಯ ಭಟ್ಟರು ಯಾರಿಗೂ ತಿಳಿಸಿರಲಿಲ್ಲ. ಪೊಲೀಸರಿಗೆ ದರೋಡೆಕೋರರ ಬಂಧನದ ಬಳಿಕ ತಿಳಿದ ಸಂಗತಿ ಇದು. ಭಟ್ಟರನ್ನು ಕೊನೆಯ ಬಾರಿ ಜು. 12ರಂದು ಬೆಳಗ್ಗೆ ಭಟ್ಟರ ಕಕ್ಕೂರಿನ ಮನೆಯಲ್ಲಿ ಅವರ ಟೈಪಿಸ್ಟ್ ವಿಮಲಾ ನೋಡಿದ್ದಾರೆ. ಭಟ್ಟರು ಅಂದು ಬೆಳಗ್ಗೆ ತಂಬುತ್ತಡ್ಕ ಬಸ್ ನಿಲ್ದಾಣದ ಬಳಿ ಇದ್ದುದನ್ನು ರಿಕ್ಷಾ ಚಾಲಕರೋರ್ವರು ನೋಡಿದ್ದಾರೆ. ಆದುದರಿಂದ ಬಟ್ಟರು ಜೂ.12ರ ಬಳಿಕವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಕಕ್ಕೂರು ಕೊಲೆ ಪ್ರಕರಣದಲ್ಲಿ ಕೊನೆಗೂ ಯಾರು ಕೊಲೆಗಾರ ಎನ್ನುವ ಪ್ರಶ್ನೆ ಮಾತ್ರ ಹಾಗೆನೇ ಉಳಿದು ಬಿಟ್ಟಿದೆ.
ಭಟ್ಟರ ಅವಶೇಷಗಳ ಡಿಎನ್ಎ ಪರೀಕ್ಷೆ
ಕಕ್ಕೂರು ವೆಂಕಟರಮಣ ಭಟ್ಟರ ಅತ್ಮಹತ್ಯೆ ಪ್ರಕರಣದ ಹಿಂದಿನ ರಹಸ್ಯ ತಿಳಿಯಲು ಪೊಲೀಸರು ಡಿಎನ್ಎ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾರೆ. ಭಟ್ಟರ ಸಹೋದರ ಅಥವಾ ಸಹೋದರಿಯ ರಕ್ತದ ಸ್ಯಾಂಪಲ್ ಪಡೆದು ಅಸ್ಥಿಪಂಜರದ ಚೂರು ಎಲುಬನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಪುತ್ತೂರು ಎಎಸ್ಪಿ ಅನುಚೇತ್ ತಿಳಿಸಿದ್ದಾರೆ.
ಕಕ್ಕೂರಿನ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಸ್ತಿಪಂಜರ ವೆಂಕಟರಮಣ ಭಟ್ಟರದು ಎಂದು ಭಟ್ಟರ ಮನೆಯಲ್ಲಿ ಟೈಪಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಮಲಾ ನಾಯ್ಕ ಗುರುತಿಸಿದ್ದಾರೆ. ಅಸ್ತಿಪಂಜರದ ಬಳಿ ದೊರೆತ ಕೊಡೆ, ಕನ್ನಡಕ ಮತ್ತು ಚಪ್ಪಲಿ ಭಟ್ಟರದು ಎಂದು ವಿಮಲಾ ಹೇಳಿರುವುದರ ಆಧಾರದಲ್ಲಿ ಅಸ್ಥಿಪಂಜರವೂ ಭಟ್ಟರದೇ ಆಗಿರಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆಯಾದರೂ ಇದರ ಸಾಚಾತನ ಡಿಎನ್ಎ ಪರಿಕ್ಷೆಯಿಂದ ಮಾತ್ರ ತಿಳಿಯಲು ಸಾಧ್ಯ. ಹೆಂಡತಿ ಮಕ್ಕಳ ಸಾಮೂಹಿಕ ಹತ್ಯೆಯ ಐದು ತಿಂಗಳ ಬಳಿಕ ಭಟ್ಟರದ್ದೆಂದು ಹೇಳಲಾಗುವ ಆಸ್ತಿಪಂಜರ ದೊರೆತಿದೆ. ಪ್ರಕರಣದ ತನಿಖೆಯ ಸಹಕಾರಕ್ಕಾಗಿ ತರಿಸಲಾದ ಶ್ವಾನಕ್ಕೂ ಭಟ್ಟರ ವಾಸನೆ ದೊರೆತಿಲ್ಲ. ಆಸ್ಥಿಪಂಜರ ದೊರೆತ ಕಾಡಿನ ವಿರುದ್ಧ ದಿಕ್ಕಿನಲ್ಲಿ ಓಡಿದ ಶ್ವಾನ ಡಾಮರು ರಸ್ತೆಯವರೆಗೆ ಸಾಗಿ ನಿಂತಿದೆ. ವೆಂಕಟರಮಣ ಭಟ್ಟರದು ಎಂದು ಗುರುತಿಸಲಾದ ಅಸ್ಥಿಪಂಜರದ ಬಳಿ ಬಾಟಲಿಯೊಂದು ಪತ್ತೆಯಾಗಿದ್ದು ಅದರಲ್ಲಿದ್ದ ದ್ರಾವಣವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುರೇಶಕುಮಾರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English