ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆನಂದ, ಸಹಾಯಕ್ಕೆ ಕೋರಿಕೆ

6:06 PM, Monday, December 10th, 2012
Share
1 Star2 Stars3 Stars4 Stars5 Stars
(5 rating, 7 votes)
Loading...

Ananda Kundaajeಮಂಗಳೂರು :ಕಳೆದ ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆತನದ್ದು ಅಸಹನೀಯ ಬದುಕು. ಆ ಯುವಕನ ಬದುಕು ಕಮರಿ ಹೋಗಿದೆ. ಜೀವನ್ಮರಣ ಹೋರಾಟದಲ್ಲಿ ಗೆಲುವು ಅಷ್ಟರಲ್ಲೇ ಇದೆ. ಜರ್ಜರಿತಗೊಂಡ ಈತನ ಕುಟುಂಬ ಬಡತನದ ಬೇಗೆಯಲ್ಲಿ ಬಳಲಿಬೆಂಡಾಗಿದೆ.

ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿ ಆನಂದ ಎಂಬ ಯುವಕನ ಚಿಂತಾಜನಕ ಸ್ಥಿತಿ, ಹಾಗೂ ಆತನ ಕುಟುಂಬದ ಭವಣೆಯ ಒಂದು ಚಿತ್ರಣ. ಎಂಟು ವರ್ಷಗಳ ಹಿಂದೆ ಮರದಿಂದ ಬಿದ್ದು ಬೆನ್ನುಹುರಿ ನೋವಿನಿಂದ ಬಳಲುತ್ತಿರಿರುವ ಆನಂದನ ಮನೆಯಲ್ಲಿ ಆನಂದವೇ ಇಲ್ಲ, ಮಧ್ಯವಯಸ್ಸಿನ ತಾಯಿ, ಓರ್ವ ತಂಗಿ ಹಾಗೂ ತಮ್ಮ ಕೂಲಿನಾಲಿ ಮಾಡಿ ಆನಂದನಿಗೆ ಚಿಕಿತ್ಸೆ ಕೊಡಿಸಿದರೂ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಚೀಂಕ್ರ ಮತ್ತು ಕುಂಞ್ಞ ದಂಪತಿಗಳ ಮೂವರು ಮಕ್ಕಳಲ್ಲಿ ಪ್ರಥಮ ಮಗನಾಗಿ ಮನೆಯ ಜವಾಬ್ದಾರಿ ಹೊರಬೇಕಾಗಿದ್ದ ಆನಂದನಿಗೆ ಉತ್ತಮ ಚಿಕಿತ್ಸೆ ನೀಡಲು ಶಕ್ತಿಯಲ್ಲದೆ ಮನೆಯವರು ಹೈರಾಣರಾಗಿದ್ದಾರೆ.

ಐದನೇ ತರಗತಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸಂಸಾರದ ಹೊಣೆ ಹೊರಲು ಸಿದ್ದನಾಗಿ ಗೋವಾದಲ್ಲಿ ಹೋಟೇಲ್ ಕೆಲಸಕ್ಕೆ ಸೇರಿದ ಆನಂದ ಮನೆಯ ಖರ್ಚು ವೆಚ್ಚಗಳಲ್ಲದೆ ತಮ್ಮ ತಂಗಿಯ ವಿದ್ಯಾಭ್ಯಾಸಕ್ಕೆ ನೆರವಾಗತೊಡಗಿದ. ಇದೇ ವೇಳೆ ತಂದೆಯ ಆರೋಗ್ಯ ಕೆಟ್ಟು ಹೋಯಿತು. ಊರಿಗೆ ಬಾರದೆ ಉಪಾಯವಿಲ್ಲ ಎನ್ನುವಂತಾಯಿತು. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಅತ್ತ ಅಪ್ಪನ ಆರೋಗ್ಯ ನೋಡಿಕೊಳ್ಳಬೇಕು, ಇತ್ತ ಸಹೋದರ ಸಹೋದರಿಯ ವಿಧ್ಯೆಗೆ ಗಮನ ನೀಡಬೇಕು. ಬೇರೆ ದಾರಿ ಕಾಣದೆ ಊರಲ್ಲಿ ಕೂಲಿ ಕೆಲಸಕ್ಕೆ ಶುರುವಿಟ್ಟುಕೊಂಡ ಆನಂದ. ಊರಲ್ಲಿ ಮರಹತ್ತುವ ಕಾಯಕವನ್ನು ಮಾಡತೊಡಗಿದ. ಇದೆ ವೇಳೆ ಈತನಿಗೂ ಅಪಸ್ಮಾರ ಖಾಯಿಲೆ ಬಾದಿಸತೊಡಗಿತು.

ಅದೊಂದು ದಿನ ಆನಂದ ಕಾಳು ಮೆಣಸು ಕೀಳಲೆಂದು ಮರ ಹತ್ತಿದವನಿಗೆ ಅಪಸ್ಮಾರ ಕಾಣಿಸಿಕೊಂಡಿತು, ನೋಡನೋಡುತ್ತಿದ್ದಂತೆ ಆನಂದ ಮರದಿಂದ ಬಿದ್ದು ಕೈ, ಕಾಲು, ಹಾಗು ತನ್ನ ಬೆನ್ನು ಹುರಿಯನ್ನು ಮುರಿದುಕೊಂಡಿದ್ದ. ಮಂಗಳೂರಿನ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಕೈಗಳು ಸರಿಹೊಂದಿದರೆ. ಆದರೆ ಸೊಂಟ ಹಾಗು ಕಾಲುಗಳು ಇವನ ಪಾಲಿಗೆ ಎಂದೂ ನೆರವಿಗೆ ಬಾರದಾದವು, ಸೊಂಟ ಹಿಡಿತವಿಲ್ಲದೆ ಮಲಗಿದಲ್ಲಿಯೇ ಎಲ್ಲಾ. ಪರಿಣಾಮ ಕಾಲುಗಳು ಕೊಳೆಯಲು ಪ್ರಾರಂಭಗೊಂಡಿದೆ.

ಈತನ ಚಿಕಿತ್ಸೆಗಾಗಿ ಮನೆಯಲ್ಲಿದ್ದ ಅಲ್ಪಸ್ವಲ್ಪ ಚಿನ್ನವನ್ನೆಲ್ಲ ಮಾರಿ, ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿ ಚೇತರಿಕೆಗಾಗಿ ಎಲ್ಲಾ ಪ್ರಯತ್ನಮಾಡಲಾಗಿದೆ ಆದರೆ ಅದೆಲ್ಲಾ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ದಿನಕಳೆದಂತೆ ಆರೋಗ್ಯ ಉಲ್ಬಣಿಸಿತು. ಆಸ್ಪತ್ರೆಯಲ್ಲಿ ಚಿಕಿತ್ಸೆಯ ವಚ್ಚ ಬೆಳೆಯುತ್ತಾ ಹೋದಾಗ ಮನೆಯವರು ಕೈಚೆಲ್ಲಿ ಕುಳಿತರು. ಈಗ ಆನಂದನ ಕಾಲುಗಳು ಕೊಳೆತು ನಾರುತ್ತಿದೆ.

ಈ ಮಧ್ಯೆ ತಂದೆಯ ಆರೋಗ್ಯವು ಉಲ್ಬಣಗೊಂಡು ಇಹಲೋಕ ತ್ಯಜಿಸಿದರು. ಇತ್ತ ತಂದೆಯು ಇಲ್ಲದೆ ಅತ್ತ ಅಣ್ಣ ಮಲಗಿದಲ್ಲೆಯಿದ್ದಾಗ ತುತ್ತು ಅನ್ನಕ್ಕೂ ತತ್ವಾರ ಬಂದಾಗ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ತಂಗಿ ಕೂಲಿ ಕೆಲಸಕ್ಕೆ ಸೇರಿಕೊಂಡು ಜೀವನಕ್ಕೆ ಹರಸಾಹಸ ಪಡುತ್ತಿದ್ದಾರೆ. ಇಲ್ಲಿಯವರೆಗೆ 4 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿ ಚಿಕಿತ್ಸೆ ನೀಡಿ ಅಸಾಯಕರಾಗಿ ಕೂತಿದ್ದಾರೆ. ವಿಕಲಾಂಗ ವೇತನಕ್ಕಾಗಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ. ಇಲ್ಲಿಯವರೆಗೆ ಯಾವುದೇ ಸಂಘಸಂಸ್ಥೆಗಳು ಇವರ ಸಹಾಯಕ್ಕೆ ಬಂದಿಲ್ಲ. ಸ್ವಜಾತಿ ಸಂಘಟನೆಗಳಂತು ಇತ್ತ ಇಣಿಕಿಯೂ ನೋಡಿಲ್ಲ ಎಂದು ಆನಂದನ ತಾಯಿ ಹತಾಶೆಯಿಂದ ನುಡಿಯುತ್ತಾರೆ. ಈ ಕುಟುಂಬದ ಒಡೆತನದಲ್ಲಿರುವ ಖಾಲಿ ಗುಡ್ಡೆ ಜಾಗದಲ್ಲಿ ಆದಾಯ ತರುವಂತದ್ದು ಏನೂ ಇಲ್ಲ. ಈತನ ತಾಯಿಗೆ ಆರೈಕೆಯಲ್ಲಿ ಕಾಲ ಕಳೆಯಬೇಕಾದ ಅನಿವಾರ್ಯತೆಯಾದರೆ. ದಿನ ಒಂದಕ್ಕೆ ಈತನ ಔಷಧಿಗಾಗಿ 300 ರೂಪಾಯಿ ಹೊಂದಿಸಬೇಕಾಗುತ್ತದೆ.

ಜಂಜಾಟದಲ್ಲಿ ಕುಸಿದಿರುವ ಆನಂದನ ಕುಟುಂಬಕ್ಕೆ ಸಹಾಯ ಮಾಡುವವರು ಆಲಂಕಾರು ಸಿ. ಎ ಬ್ಯಾಂಕ್ ನ ಕೋೈಲ ಶಾಖೆಯ ಖಾತೆ ನಂಬ್ರ ; 2786 ಅಥವಾ ಆನಂದ ಬಿನ್ ಚೀಂಕ್ರ ಮುಗೇರ, ಕುಂಡಾಜೆ ಮನೆ ರಾಮಕುಂಜ ಗ್ರಾಮ ಮತ್ತು ಅಂಚೆ ಪುತ್ತೂರು ತಾಲೂಕು ದ.ಕ 574241 ಇದಕ್ಕೆ ಸಹಾಯ ಮಾಡಬಹುದು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English