ಪುತ್ತೂರು ಜೋಡಿ ಆತ್ಮಹತ್ಯೆ ಪ್ರೀತಿಗೆ ಯುವಕನ ತಾಯಿಯೇ ವಿಲನ್ ಆದಳು !

11:07 AM, Saturday, December 29th, 2012
Share
1 Star2 Stars3 Stars4 Stars5 Stars
(No Ratings Yet)
Loading...

Chetan Navyaಮಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಜಾ ಘಟನೆ ಪುತ್ತೂರು ಪೇಟೆಯ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕರ್ಮಲ ಎಂಬಲ್ಲಿಂದ ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಅವರ ವಿವಾಹಕ್ಕೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿರುವುದೇ ಆತ್ಮಹತ್ಯೆಗೆ ಕಾರಣ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿ ಬರುತ್ತಿದೆ.

ಚಿಕ್ಕಮುಡ್ನೂರು ಗ್ರಾಮದ ಕರ್ಮಲ ನಿವಾಸಿ ರುಕ್ಮಯ್ಯ ಗೌಡ ಅವರ ಪುತ್ರ ಚೇತನ್ (26) ಮತ್ತು ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿ ನಿವಾಸಿ ವಿಶ್ವನಾಥ ಗೌಡ ಅವರ ಪುತ್ರಿ ನವ್ಯ ಆತ್ಮಹತ್ಯೆ ಮಾಡಿ ಕೊಂಡ ಜೋಡಿ. ಅವರಿಬ್ಬರು ಕಳೆದ ಡಿಸೆಂಬರ್12ರಂದು ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ಶವ ಚೇತನ್ ಕುಟುಂಬಕ್ಕೆ ಸೇರಿದ ವಾಸ್ತವ್ಯವಿಲ್ಲದ ಹಳೆ ಮನೆಯೊಂದರ ಪಕ್ಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಇಬ್ಬರು ಅಮರ ಪ್ರೇಮಿಗಳು:

ಪುತ್ತೂರಿನ ಕನ್ ಸ್ಟ್ರಕ್ಷನ್ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕನಾಗಿ ದುಡಿಯುತ್ತಿದ್ದ ಚೇತನ್ ಮತ್ತು ಸ್ಟೀಲ್ ಅಂಗಡಿಯೊಂದರಲ್ಲಿ ಸೇಲ್ಸ್ ಗರ್ಲ್ ಆಗಿ ದುಡಿಯುತ್ತಿದ್ದ ನವ್ಯ ಅವರು ಕಳೆದ ಒಂದು ವರ್ಷದಿಂದೀಚೆಗೆ ಪರಸ್ಪರ ಪ್ರೀತಿಸುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರಿಬ್ಬರು ವಿವಾಹವಾಗಲು ತೀರ್ಮಾನಿಸಿದ್ದರು. ಆದರೆ ಚೇತನ್ ಮನೆಯವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕಾರಣದಿಂದ ಅವರು ಮನನೊಂದು ಜೊತೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ಡಿಸೆಂಬರ್12ರಂದು ಬೆಳಿಗ್ಗೆ ಕೆಲಸಕ್ಕೆಂದು ಹೊರಟುಹೋಗಿದ್ದ ನವ್ಯ ಮತ್ತು ಚೇತನ್ ಅವರು ಸಂಜೆ ಬಳಿಕ ನಾಪತ್ತೆಯಾಗಿದ್ದರು. ನಾಪತ್ತೆ ಯಾದ ಬಳಿಕ ಅವರಿಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನವ್ಯಳಿಗಾಗಿ ಹುಡುಕಾಡಿದ ಆಕೆಯ ಮನೆಯವರು ಈ ಬಗ್ಗೆ ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಅವರಿಬ್ಬರು ನಾಪತ್ತೆಯಾದರೂ, ವಿವಾಹವಾಗಿ ಮರಳಿ ಮನೆಗೆ ಬರಬಹುದೆಂಬ ಶಂಕೆಯಿಂದ ದೂರು ದಾಖಲಿಸಲು ಅವರು ಹಿಂಜರಿದಿದ್ದರು. ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿರಲಿಲ್ಲ. ನಂತರ ನಾಪತ್ತೆಯಾಗಿದ್ದ ಚೇತನ್ ಮತ್ತು ನವ್ಯ ಅವರು ಚೇತನ್ ಅವರ ಮನೆಯ ಸಮೀಪದಲ್ಲಿರುವ ಅವರ ಕುಟುಂಬಕ್ಕೆ ಸೇರಿದ ಪಾಲುಬಿದ್ದ ವಾಸ್ತವ್ಯವಿಲ್ಲದ ಹಳೆಯ ಮನೆಯ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೇತನ್ ಮತ್ತು ನವ್ಯ ಒಂದೇ ಜಾತಿ ಯವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರ ವಿವಾಹಕ್ಕೆ ನವ್ಯಳ ಕಡೆಯವರ ಒಪ್ಪಿಗೆ ಇತ್ತು. ಆದರೆ ಚೇತನ್ ಕಡೆಯವರ ತೀವ್ರ ಆಕ್ಷೇಪವಿತ್ತು ಎಂಬ ಮಾಹಿತಿ ಲಭಿಸಿದೆ. ಬೀರನಹಿತ್ಲು ಶಾಲೆಯಲ್ಲಿ ಶಿಕ್ಷಕಿಯಾಗಿರುವ ಚೇತನ್ ನ ತಾಯಿ ಅವರಿಬ್ಬರ ವಿವಾಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆಂಬ ಆರೋಪವೂ ಕೇಳಿಬರುತ್ತಿದೆ.

ಎರಡು ವಾರಗಳ ಹಿಂದೆಯಷ್ಟೇ ಚೇತನ್ ಅವರು ನವ್ಯಳ ಮನೆಗೆ ತೆರಳಿ ತಾನು ನವ್ಯಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ತನಗೆ ವಿವಾಹ ಮಾಡಿಕೊಡಬೇಕು. ತನ್ನ ಹೆತ್ತವರನ್ನು ಕರೆದು ಕೊಂಡು ಬಂದು ತಾನು ವಿವಾಹ ಸಂಬಂಧದ ಮಾತುಕತೆ ನಡೆಸುತ್ತೇನೆ ಎಂಬ ಕೋರಿಕೆಯನ್ನು ನವ್ಯಳ ಹೆತ್ತವರ ಮತ್ತು ಸಹೋದರರ ಮುಂದಿಟ್ಟಿದ್ದರು. ವಿವಾಹಕ್ಕೆ ಒಪ್ಪಿಗೆ ಸೂಚಿಸಿರುವ ನವ್ಯ ಕಡೆಯವರು ನವ್ಯಳ ಸಹೋದರಿಯರಿಬ್ಬರ ಹೆರಿಗೆಯಾಗಿದ್ದು, ಆ ಮಕ್ಕಳ ನಾಮಕರಣದ ಬಳಿಕ ವಿವಾಹ ನಿಶ್ಚಿತಾರ್ಥ ಮತ್ತು ವಿವಾಹ ದಿನಾಂಕ ನಿಗದಿಪಡಿಸುವ ಕಾರ್ಯಕ್ರಮ ಇಟ್ಟು ಕೊಳ್ಳೋಣ ಎಂದಿದ್ದರಂತೆ. ಆದರೆ ವಿಧಿ ಬಗೆದದ್ದೇ ಬೇರೆ ಎಂದು ಅಲವತ್ತು ಕೊಳ್ಳುತ್ತಿದ್ದಾರೆ ನವ್ಯ ಕಡೆಯವರು.

ಈ ವಿವಾಹ ಮಾತುಕತೆಯ ಬಳಿಕ ಚೇತನ್ ಮತ್ತು ಶಿಕ್ಷಕಿಯಾಗಿರುವ ಆತನ ತಾಯಿಯ ನಡುವೆ ಈ ವಿವಾಹ ಸಂಬಂಧದ ವಿಚಾರದಲ್ಲಿ ಗಲಾಟೆ ನಡೆದಿತ್ತು. ತಾಯಿ ಈ ವಿವಾಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣದಿಂದಾಗಿ ಚೇತನ್ ಆ ಬಳಿಕ ಮಂಕಾಗಿದ್ದ ಎಂದು ಜನರಾಡಿಕೊಳ್ಳುತ್ತಿದ್ದಾರೆ. ನಾಪತ್ತೆಯಾದ ಬಳಿಕ ನವ್ಯಾಳ ಕಡೆಯವರು ಹಲವು ಬಾರಿ ಚೇತನ್ ನ ಮನೆಯವರನ್ನು ಸಂಪರ್ಕಿಸಿ ಅವರಿಬ್ಬರ ಸುಳಿವಿನ ಬಗ್ಗೆ ವಿಚಾರಿಸಿದ್ದರು. ಆದರೆ ಆ ವೇಳೆ ಚೇತನ್ ಕಡೆಯವರು ನಾವು ಆತನನ್ನು ಬಿಟ್ಟು ಬಿಟ್ಟಿದ್ದೇವೆ, ಎಲ್ಲಾದರೂ ಸತ್ತು ಹೋಗಲಿ ಎಂದು ಹೇಳಿಕೊಂಡಿದ್ದರು ಎನ್ನುವ ನವ್ಯಾಳ ಕಡೆಯವರು ಪರಸ್ಪರ ಪ್ರೀತಿಸುತ್ತಿದ್ದ ಅವರಿಬ್ಬರ ಸಾವಿಗೆ ಚೇತನ್ ಕಡೆಯವರ ಆಕ್ಷೇಪವೇ ಕಾರಣ ಎಂದು ಆರೋಪಿಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English