ಮಂಗಳೂರು : ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್ ಅವರು ನವಂಬರ್ 30 ರಂದು ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ನಡದ ಅಂತರಾಷ್ಟ್ರೀಯ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಾಷಣ ಮಾಡಿ ಧರ್ಮದ ಕುರಿತು ತಮ್ಮ ನಿಲುವನ್ನು ಮಂಡಿಸಿದರು. ಅದಕ್ಕೂ ಮುಂಚಿತವಾಗಿ ವಿಶ್ವ ಕ್ಯಾಥಲಿಕ್ ಸಮುದಾಯದ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ವ್ಯಾಟಿಕನ್ ಸಿಟಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಶ್ರೀ ನಾರಾಯಣ ಗುರುಗಳು ಮೊದಲ ಅಂತಾರಾಷ್ಟ್ರೀಯ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಿ ಶತಮಾನೋತ್ಸವ ಸಂದ ಸ್ಮರಣಾರ್ಥ ಈ ಸಮ್ಮೇಳನವನ್ನು ವ್ಯಾಟಿಕನ್ ಸಿಟಿಯ ಆಗಸ್ತಿನ್ಯೇನಮ್ ನಲ್ಲಿ ಆಯೋಜಿಸಲಾಗಿದೆ. “ಮಾನವೀಯತೆಗಾಗಿ ಧರ್ಮಗಳ ಒಗ್ಗಟ್ಟು” ಎಂಬ ವಿಷಯದಲ್ಲಿ ನಡೆಯುವ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತ ಇರುವ ವಿವಿಧ ಧರ್ಮಗಳ ಗಣ್ಯರು ಭಾಗವಹಿಸಿದ್ಧರು.ಕರ್ನಾಟಕದಿಂದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಏಕೈಕ ಗಣ್ಯವ್ಯಕ್ತಿ ಎಂಬ ಹೆಗ್ಗಳಿಕೆಗೆ ಸ್ಪೀಕರ್ ಯು.ಟಿ. ಖಾದರ್ ಪಾತ್ರರಾಗಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಲು ಸ್ಪೀಕರ್ ಅವರು ನವಂಬರ್ 29 ಬೆಳಗಿನ ಜಾವ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು ನವೆಂಬರ್ 30 ರಂದು ಸದರಿ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಡಿಸೆಂಬರ್ 2 ರಂದು ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
Click this button or press Ctrl+G to toggle between Kannada and English