ಧರ್ಮಸ್ಥಳದಲ್ಲಿ ಸಮವಸರಣ ಪೂಜಾ ವೈಭವ

10:59 PM, Monday, December 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ರಾತ್ರಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಮವಸರಣ ಪೂಜೆ ನಡೆಯಿತು.

ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದ ಬಳಿಕ ಭಗವಾನ್ ಚಂದ್ರನಾಥಸ್ವಾಮಿಯ ಅಷ್ಟವಿಧಾರ್ಚನೆ ಪೂಜೆ, ಸಿದ್ಧಪರಮೇಷ್ಠಿಗಳ ಪೂಜೆ, ಜಯಮಾಲಾ ಅರ್ಘ್ಯ, ಬಾಹುಬಲಿಸ್ವಾಮಿಯ ಪೂಜೆ, ಶ್ರುತದೇವಿ ಪೂಜೆ, ಗಣಧರಪರಮೇಷ್ಠಿ ಪೂಜೆ ಬಳಿಕ ದೀಪಾರಾಧನೆ, ಶಾಂತಿಧಾರಾ ಮತ್ತು ಪುಷ್ಪಾಂಜಲಿಯೊAದಿಗೆ ಪೂಜಾ ಕಾರ್ಯಕ್ರಮ ಸಮಾಪನಗೊಂಡಿತು.

ಶಿಶಿರ್ ಇಂದ್ರರು ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸೌಮ್ಯಶುಭಚಂದ್ರ, ಸಾವಿತ್ರಿಪುಷ್ಪದಂತ, ಮಂಜುಳಾಮಲ್ಲಿನಾಥ್ ಮತ್ತು ಭಾರತಿ ಅವರು ಸಂಸ್ಕೃತ, ಪ್ರಾಕೃತ, ಕನ್ನಡ, ಹಿಂದಿ ಮತ್ತು ತುಳು ಭಾಷೆಯಲ್ಲಿ ರಚಿತವಾದ ಜಿನಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದರು.

ಸಮವಸರಣ ಎಂದರೇನು?
ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಸದವಕಾಶ ಇದೆ. ಸಮವಸರಣವೆಂಬುದು ಒಂದು ವಿಶ್ವಕೋಶ. ಜೈನಾಗಮದ ಸಮಸ್ತ ಸಾರವನ್ನು ಪ್ರಚುರಪಡಿಸಿದ ವಿಶ್ವವಿದ್ಯಾಲಯ.

ಸನ್ಮಾನ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹಾಗೂ ವಿಶೇಷ ಸಂದರ್ಭದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಪಾಕಪರಿಣತರಾಗಿ ಅಡುಗೆ ವಿಭಾಗದಲ್ಲಿ ಸಹಕರಿಸಿದ ಬಂಗಾಡಿಯ ಸನತ್ಕುಮಾರ ಜೈನ್ ಮತ್ತು ರವಿರಾಜ ಜೈನ್ ಅವರನ್ನು ಗೌರವಿಸಲಾಯಿತು.

ಉದಯ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ಜಿನಗಾನೋತ್ಸವ: ಬೆಂಗಳೂರಿನ ನವೀನ್‌ಜಾಂಬಳೆ ಮತ್ತು ಬಳಗದವರು ಮೂಡಬಿದ್ರೆಯ ವೀಣಾ ರಘುಚಂದ್ರ ಶೆಟ್ಟಿ ಅವರು ರಚಿಸಿದ ಜಿನಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭದಲ್ಲಿ ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾಹರ್ಷೇಂದ್ರಕುಮಾರ್, ಶ್ರದ್ಧಾಅಮಿತ್, ಸೋನಿಯಾಯಶೋವರ್ಮ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English