ಮಂಗಳೂರು : ಮಂಗಳೂರು ಕೆಥೋಲಿಕ್ ಬ್ಯಾಂಕ್‌ನಲ್ಲಿ ಸಾಲ ಪಡೆದ ಪೆರ್ಮಂಕಿ ಗ್ರಾಮದ ಮನೋಹರ ಪಿರೇರಾ (47) ಎಂಬವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಕೆಥೋಲಿಕ್ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಉಳಾಯಿಬೆಟ್ಟು ಕುಟಿನ್ಹೋ ಪದವು ನಿವಾಸಿ ಮನೋಹರ್ ಪಿರೇರಾ(47) ತನ್ನ ಸಾವಿಗೆ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ಕಾರಣವೆಂದು ವಿಡಿಯೋ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತನ್ನ 9 ಲಕ್ಷ ಹಣವನ್ನು ತಿಂದಿದ್ದಾನೆ. ಎರಡು ವರ್ಷಗಳಿಂದ ಕೆಲಸ ಮಾಡಲಾಗದೆ ಕಷ್ಟ ಪಡುತ್ತಿದ್ದೇನೆ, ಮನೆಯನ್ನು ಸೀಜ್ ಮಾಡಿದ್ದಾನೆ, ಇನ್ನೂ ಹಣ ಆಗಬೇಕೆಂದು ಹೇಳುತ್ತಿದ್ದಾನೆ. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದು ಚಿಕಿತ್ಸೆ ಪಡೆದು ಬಂದಿದ್ದೇನೆ. ಬದುಕು ನಡೆಸುವುದೇ ಕಷ್ಟವಾಗಿದೆ ಇತ್ಯಾದಿ ವಿಷಯಗಳನ್ನು ತುಳುವಿನಲ್ಲಿ ಹೇಳಿ ವಿಡಿಯೋ ಮಾಡಿದ್ದರು. ವಿಡಿಯೋವನ್ನು ವಾಟ್ಸಪ್ ಗ್ರೂಪಿನಲ್ಲಿ ಹಾಕಿದ್ದರು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮನೋಹರ್ ಪಿರೇರಾ ಅವರ ತಮ್ಮ ಜೀವನ್ ಪಿರೇರಾ ಕಂಕನಾಡಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಇದೀಗ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆಯೆಂದು ಪ್ರಕರಣ ದಾಖಲಿಸಿದ್ದು ಆರೋಪಿ ಅನಿಲ್ ಲೋಬೊವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Click this button or press Ctrl+G to toggle between Kannada and English