ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು

11:53 PM, Thursday, December 26th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಪಕ್ಷದ ಸಮಾವೇಶವನ್ನು ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ನಕಲಿ ಗಾಂಧಿಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. ಪ್ರಧಾನಿ, ಗೃಹ ಸಚಿವರು, ಎಚ್‌.ಡಿ.ಕುಮಾರಸ್ವಾಮಿ, ಸಂಸದರು, ಯಾರನ್ನೂ ಆಹ್ವಾನಿಸದೆ ಕಾಂಗ್ರೆಸ್‌ ಪಕ್ಷದ ನಾಯಕರನ್ನು ಮಾತ್ರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಇದು ಸರ್ಕಾರಿ ಕಾರ್ಯಕ್ರಮವಲ್ಲ, ಕಾಂಗ್ರೆಸ್‌ ಪಕ್ಷದ ಕಾರ್ಯಕ್ರಮ ಎಂದು ದೂರಿದರು.

ಇದು ಕಾಂಗ್ರೆಸ್‌ನ ಕಾರ್ಯಕ್ರಮವಾಗಿರುವುದರಿಂದ ನಾವ್ಯಾರೂ ಹೋಗುವುದಿಲ್ಲ. ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆಗೆ ನಾವೆಲ್ಲರೂ ಪುಷ್ಪ ನಮನ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್‌ನವರು ಅಖಂಡ ಭಾರತವನ್ನು ಒಡೆದು ಹಾಕಿದ್ದರು. ನಾವು ಅಖಂಡ ಭಾರತದ ಚಿತ್ರ ತೋರಿಸಿದರೆ, ಕಾಂಗ್ರೆಸ್‌ನವರು ಜಮ್ಮು-ಕಾಶ್ಮೀರ ಇಲ್ಲದ ಭಾರತದ ಚಿತ್ರ ತೋರಿಸುತ್ತಿದ್ದಾರೆ. ಭಾರತದ ಭೂಪಟವನ್ನೇ ಛಿದ್ರ ಮಾಡಿರುವುದು ಖಂಡನೀಯ. ಕಾಂಗ್ರೆಸ್‌ ಇಡೀ ದೇಶವನ್ನು ಒಡೆಯುವ ಮನಸ್ಥಿತಿ ಹೊಂದಿದೆ ಎಂದರು.

ಅಂಬೇಡ್ಕರ್‌ರನ್ನು ಸೋಲಿಸಿದ ಕಾಂಗ್ರೆಸ್‌

ಬಾಬಾ ಸಾಹೇಬ್‌ ಅಂಬೇಡ್ಕರ್‌ ಎಂದೂ ಕಾಂಗ್ರೆಸ್‌ನ ನಾಯಕರಾಗಿರಲಿಲ್ಲ. ಅವರು ಕಾಂಗ್ರೆಸ್‌ ಪಕ್ಷವನ್ನು ವಿರೋಧಿಸಿ, ಸರ್ಕಾರದ ವಿರುದ್ಧ ನಿಂತಿದ್ದರು. ತಮ್ಮದೇ ಪಕ್ಷ ಆರಂಭಿಸಿ ಅಲ್ಲಿಂದಲೇ ಸ್ಪರ್ಧಿಸಿದ್ದರು. ಅವರು ಚುನಾವಣೆಗೆ ನಿಂತಾಗ ಜವಹರಲಾಲ್‌ ನೆಹರು ಅವರ ವಿರುದ್ಧ ಪ್ರಚಾರ ಮಾಡಿ, ಅಂಬೇಡ್ಕರ್‌ ಸೋಲಿಸಿ ಎಂಬ ಸಂದೇಶ ನೀಡಿದ್ದರು. ಈಗ ಕಾಂಗ್ರೆಸ್‌ ನಾಯಕರು ಯಾವ ಮುಖ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಜವಹರಲಾಲ್‌ ನೆಹರು ತಮಗೇ ತಾವೇ ಭಾರತರತ್ನ ಕೊಟ್ಟುಕೊಂಡರು. ಇನ್ನು ರಾಹುಲ್‌ ಗಾಂಧಿಗೆ ಮಾತ್ರ ಬಾಕಿ ಇದೆ. ಆದರೆ ಅಂಬೇಡ್ಕರರಿಗೆ ಯಾವುದೇ ಪ್ರಶಸ್ತಿ ನೀಡಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರರ ಜೀವನದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈಗ ಅಂಬೇಡ್ಕರ್‌ ಫೋಟೊವನ್ನು ಕಾಂಗ್ರೆಸ್ಸಿಗರು ಇಟ್ಟುಕೊಳ್ಳುತ್ತಾರೆ. ಆದರೆ ನೆಹರು ಅವರು ಅಂಬೇಡ್ಕರರನ್ನು ಎಂದೂ ಹೊಗಳಲಿಲ್ಲ. ಈಗ ಮತ ರಾಜಕಾರಣಕ್ಕಾಗಿ ಅಂಬೇಡ್ಕರ್‌ ಹೆಸರು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್‌ ನಾಯಕರು ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದರು. ಅವರು ಮೃತರಾದಾಗ ಸಮಾಧಿಗೂ ಜಾಗ ನೀಡಿರಲಿಲ್ಲ. ಒಬ್ಬೇ ಒಬ್ಬ ಕಾಂಗ್ರೆಸ್‌ ನಾಯಕ ಅಂತ್ಯಸಂಸ್ಕಾರಕ್ಕೆ ಹಣ ನೀಡಿರಲಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ ಸಮಾಧಿಗೆ ಸಾಕಷ್ಟು ಜಾಗ ನೀಡಲಾಗಿದೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದರು.

ಶಾಸಕರಾದ ಸಿ.ಟಿ.ರವಿ, ಶಾಸಕ ಮುನಿರತ್ನ ಅವರ ಮೇಲಿನ ಹಲ್ಲೆ ನೋಡಿದರೆ, ರಾಜ್ಯದಲ್ಲಿ ಗೂಂಡಾ ಆಡಳಿತ ನಡೆಯುತ್ತಿದೆ ಎಂದರ್ಥ. ಕೋರ್ಟ್‌ನಲ್ಲಿ ತೀರ್ಮಾನವಾಗುವವರೆಗೆ ಯಾರೂ ಅಪರಾಧಿಯಲ್ಲ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English