ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನನಿನ ಪ್ರಧಾನ ಕಛೇರಿ ಉದ್ಘಾಟನೆ

12:01 AM, Friday, December 27th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ತುಳುನಾಡಿನಲ್ಲಿ ಜಾತಿ ಮತ ಭಾಷೆ ಭೇದವಿಲ್ಲದೆ ಸರ್ವರನ್ನು ಅನುಗ್ರಹಿಸುವವಳು ಕಟೀಲ ಉಳ್ಳಾಲ್ತಿ ಶ್ರೀ ದುರ್ಗಾಪರಮೇಶ್ವರಿ ತಾಯಿ. ತುಳುನಾಡಿನಲ್ಲಿ ಪಂಗಡ ಬೇದ ಭಾವವಿಲ್ಲದೆ ಒಗ್ಗೂಡಿಸುವ ಮನೋಭಾವದಿಂದ ತುಳುವರ್ಲ್ಡ್ ಫೌಂಡೇಶನ್ ಕಟೀಲಿನ ಈ ಪುಣ್ಯ ನೆಲದಲ್ಲಿ ಪ್ರವರ್ತನ ಆರಂಭಿಸಿರುವುದು ಮಹಾತಾಯಿಯ ಅನುಗ್ರಹ. ನಮ್ಮ ನಡುವೆ ಇರುವ ವಿಭಜನೆಗಳ ಹಿಂದಿರುವ ಕಟ್ಟುಕಥೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು ಹಾಗೂ ಸತ್ಯ ಅಸತ್ಯಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರು ಅಭಿಪ್ರಾಯಪಟ್ಟರು. ಅವರು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಶ್ರೀ ಕ್ಷೇತ್ರ ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನ್ನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುವರಿಗೆ ಪ್ರತ್ಯೇಕ ರಾಜ್ಯ ಸ್ಥಾನಮಾನಗಳು ಯಾವುದು ಇಲ್ಲದಿದ್ದರೂ ತುಳು ಭಾಷೆ ಇಂದಿಗೂ ರಾಜ ಮರ್ಯಾದೆಯಲ್ಲಿ ಇದೆ. ಇದಕ್ಕೆ ಕಾರಣ ನಾವು ನಂಬಿಕೊಂಡು ಬಂದಿರುವ ದೈವ ದೇವರುಗಳು. ನಮ್ಮ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲಿ ತುಳುವ ಮಹಾಸಭೆ ಎಂಬ ಸಂಸ್ಥೆಯನ್ನು ಸ್ಥಾಪಿಸಿ ತುಳುವರ ಬೇಡಿಕೆಗಳಿಗೋಸ್ಕರ ಹೋರಾಟ ಮಾಡಿದ್ದರು. ಅದರ ನೆನಪಿಗಾಗಿ ತುಳುವರ್ಲ್ಡ್ ಫೌಂಡೇಶನ್ “ತುಳುವ ಮಹಾಸಭೆ “ಯ ಹೆಸರಿನಲ್ಲಿ ತುಳುನಾಡು ಕೂಟಗಳನ್ನು ರಚಿಸಲಿದೆ. ತುಳುನಾಡಿನ ಎಲ್ಲಾ ಗ್ರಾಮಗಳಲ್ಲಿ ಈ ಕೂಟಗಳನ್ನು ರಚಿಸ ಬೇಕಾಗಿದ್ದು ಎಲ್ಲಾ ತುಳುವರು ಈ ಯೋಜನೆಯಲ್ಲಿ ಭಾಗಿಯಾಗಬೇಕು. ಇದಕ್ಕಾಗಿ ಕಟೀಲು ತಾಯಿಯ ಸನ್ನಿಧಿಯಲ್ಲಿ ತುಳುವ ಮಹಾಸಭೆಯ ಯೋಜನೆಗಳಿಗೆ ಚಾಲನೆ ನೀಡಲಾಗಿದೆ, ಇದೀಗ ತುಳುವ ಮಹಾಸಭೆಗೆ 96 ವರ್ಷಗಳು ಪೂರ್ತಿಯಾಗಿದ್ದು, 100ನೇ ವರ್ಷ 2028ರಲ್ಲಿ ವಿಶ್ವ ತುಳುವ ಮಹಾಸಭೆ ನಡೆಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಹರಿಕೃಷ್ಣ ಪುನರೂರು, ತುಳು ಅಕಾಡೆಮಿ ಮಾಜಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ, ಶ್ರೀಮತಿ ವಜ್ರಾಕ್ಷಿ ಬಾಲಕೃಷ್ಣ ಶೆಟ್ಟಿ ಪೊಳಲಿ, ಲಯನ್ ದಿವಾಕರ ಶೆಟ್ಟಿ ಸಾಂಗ್ಲಿ, ಕಟೀಲ್ ಕಾಲೇಜು ಪ್ರಾಂಶುಪಾಲರಾದ ಡಾ. ವಿಜಯ್, ಭುವನಾಭಿರಾಮ ಉಡುಪ, ಯೋಗೀಶ್ ಶೆಟ್ಟಿ ಜೆಪ್ಪು, ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಪುತ್ತೂರು ತುಳುಕೂಟ ಅಧ್ಯಕ್ಷ ಪಾಟ್ರಿಕ್ ಸಿಪ್ರಿಯನ್ಹ್ ಮಸ್ಕರ್ನಸ್, ಸುಧಾಕರ ಶೆಟ್ಟಿ ಕಟೀಲು, ವಿಶ್ವನಾಥ ಶೆಟ್ಟಿ ಕಟೀಲು, ಶಂಕರ ಶೆಟ್ಟಿ ಕಟೀಲು, ಉಮೇಶ್ ಶೆಟ್ಟಿ ಕಟೀಲು, ಮಂದಾರ ರಾಜೇಶ್ ಭಟ್, ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಮುರಳಿ ಭಟ್ ಉಪ್ಪಂಗಳ, ಸಂಜೀವ ಪಾಂಡೇಶ್ವರ, ಮಂಜುನಾಥ ಅಡಪ್ಪ, ಪ್ರಕಾಶ್ ಪಾವಂಜೆ ಐಲೇಸ, ಪದ್ಮಶ್ರೀ ಭಟ್ ನಿಡ್ಡೋಡಿ ಮೊದಲಾದವರು ಶುಭ ಹಾರೈಸಿದರು.

ತುಳುವರ್ಲ್ಡ್ ಫೌಂಡೇಶನ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಸಂಚಾಲಕ ಪ್ರಮೋದ್ ಸಪ್ರೆ ಸ್ವಾಗತಿಸಿ, ಡಾ. ರಾಜೇಶ್ ಆಳ್ವ ಬದಿಯಡ್ಕ ಧನ್ಯವಾದ ನೀಡಿದರು. ಕಾರ್ಯಕ್ರಮದಲ್ಲಿ ಬೊಲಿಕೆ ಜಾನಪದ ಕಲಾವಿದರಾದ ಶಂಕರ ಸ್ವಾಮಿಕೃಪಾ ಮತ್ತು ತಂಡದವರಿಂದ ಪಾಡ್ದನ ಮೇಳ ನಡೆಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English