ಮಂಗಳೂರು: ಮಂಗಳೂರಿನ ಕುಳಾಯಿ ಬಳಿಯ ಹೊಸಬೆಟ್ಟು ಬೀಚ್ ಗೆ ಪ್ರವಾಸಕ್ಕೆ ಬಂದಿದ್ದ ಮೂವರು ಪ್ರವಾಸಿಗರು ಸಮುದ್ರಪಾಲಾಗಿದ್ದಾರೆ. ಮೃತರು ಬೆಂಗಳೂರಿನ ಸತ್ಯವೇಲು, ಚಿತ್ರದುರ್ಗದ ಮಂಜುನಾಥ್ ಮತ್ತು ಶಿವಮೊಗ್ಗದ ಶಿವಕುಮಾರ್ ಎಂದು ತಿಳಿದುಬಂದಿದೆ.
ಪ್ರವಾಸಿಗರು ಸಮುದ್ರದ ಅಲೆಗೆ ಸಿಲುಕಿದ್ದನ್ನು ಕಂಡ ಸ್ಥಳೀಯರು ಮೀನುಗಾರರು ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೂವರು ಸಮುದ್ರಪಾಲಾಗಿದ್ದು ಬೀದರ್ ಮೂಲದ ಪರಮೇಶ್ವರ್ ಎಂಬಾತನನ್ನು ರಕ್ಷಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶಿವಕುಮಾರ್ ಮತ್ತು ಸತ್ಯವೇಲು ಎಂಬವರ ಮೃತದೇಹ ಸಿಕ್ಕಿದ್ದು ಮಂಜುನಾಥ್ ಮೃತದೇಹಕ್ಕೆ ಹುಡುಕಾಟ ನಡೆಯುತ್ತಿದೆ.
ನಾಲ್ವರು ಯುವಕರು ಬೆಂಗಳೂರಿನ ಎಎಂಸಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಆತ್ಮೀಯ ಗೆಳೆಯರಾಗಿದ್ದರು. ಮಂಗಳವಾರ ರಾತ್ರಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಿದ್ದ ಅವರು ಬುಧವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದರು.
ಹೋಟೆಲ್‌ನಲ್ಲಿ ಉಪಹಾರ ಸೇವಿಸಿ, ಮಧ್ಯಾಹ್ನ ಕುಳಾಯಿ ಜೆಟ್ಟಿಗೆ ತೆರಳಿದರು. ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನಾಲ್ವರೂ ನೀರಿನಲ್ಲಿ ಸಿಲುಕಿಕೊಂಡರು. ಸ್ಥಳೀಯ ಮೀನುಗಾರರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಸಹಾಯ ಬರುವ ಮೊದಲು ಮೂವರು ಯುವಕರು ನೀರಿನಲ್ಲಿ ಮುಳುಗಿದರು. ಅವರಲ್ಲಿ ಒಬ್ಬನನ್ನು ರಕ್ಷಿಸಲಾಗಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು.
ಸುದ್ದಿ ತಿಳಿಯುತ್ತಿದ್ದಂತೆ ಸುರತ್ಕಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.ಘಟನೆ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English