ಉಜಿರೆ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಉದ್ಘಾಟನೆ

10:30 PM, Thursday, January 9th, 2025
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಕಳೆದ ನೂರು ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಜ್ಞಾನದಾಸೋಹದ ಮೂಲಕ ಸಾವಿರಾರು ಮಂದಿ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸಿ ಸಮಾಜಕ್ಕೆ ಅರ್ಪಿಸಿದ ಉಜಿರೆಯ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ವರ್ಷವಿಡಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.

ಅವರು ಗುರುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನ ನಾಗರಿಕರು ಸಮಾರಂಭಕ್ಕೆ ಸಕ್ರಿಯ ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಅವರು ಶತಮಾನೋತ್ಸವ ಲಾಂಛನವನ್ನೂ ಅನಾವರಣಗೊಳಿಸಿದರು.

ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ತಮ್ಮ ಪ್ರಾಥಮಿಕ ಶಾಲಾದಿನಗಳ ಸಿಹಿ-ಕಹಿ ಅನುಭವಗಳನ್ನು ಸ್ಮರಿಸಿಕೊಂಡು, ಪ್ರಾಥಮಿಕ ಶಾಲಾ ಶಿಕ್ಷಕರು ನೀಡಿದ ಮಾರ್ಗದರ್ಶನ, ಕಲಿಸಿದ ಶಿಸ್ತು, ಸಂಸ್ಕಾರ ತಮ್ಮ ಬದುಕಿಗೆ ದಾರಿದೀಪವಾಗಿದೆ. ದೇವಪ್ಪ ಗೌಡ ಮೇಸ್ಟುç ಕಲಿಸಿದ ನಾಟಕದ ಅಭಿನಯ, ಕಮಲಾ ಟೀಚರ್ ಹೇಳಿಕೊಟ್ಟ ಸಂಸ್ಕಾರ, ತರಗತಿಯಲ್ಲಿ ಮಕ್ಕಳ ತುಂಟಾಟಕ್ಕೆ ನೀಡಿದ ಬೆತ್ತದ ಪೆಟ್ಟು, ಹುಡುಗಿಯರ ಮಧ್ಯೆ ತಪ್ಪು ಮಾಡಿದ ಹುಡುಗರನ್ನು ಕುಳಿತುಕೊಳ್ಳಿಸಿದ ಪ್ರಕರಣವನ್ನು ಸ್ಮರಿಸಿಕೊಂಡರು.

ಶಾಲಾ ವಠಾರದಲ್ಲಿ ತಿಂದ ಐಸ್‌ಕ್ಯಾಂಡಿ, ಅಕ್ರೋಟ್, ಹಣ್ಣು-ಹಂಪಲುಗಳ ಸವಿಯ ಸೊಗಡನ್ನು ಧನ್ಯತೆಯಿಂದ ನೆನಪಿಸಿಕೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಶುಭಹಾರೈಸಿ ಧರ್ಮಸ್ಥಳದಿಂದ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ನೀಡುತ್ತಿರುವ ಸಹಕಾರ, ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ ಶತಮಾನೋತ್ಸವ ಸಮಿತಿ ಅಧ್ಯಕ್ಷ ಶರತ್‌ಕೃಷ್ಣ ಪಡ್ವೆಟ್ನಾಯ ಮಾತನಾಡಿ, ವರ್ಷವಿಡಿ ತಿಂಗಳಿಗೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.

ಶತಮಾನೋತ್ಸವ ಸಮಿತಿಯ ಪ್ರಧಾನಕಾರ್ಯದರ್ಶಿ ಅಬೂಬಕ್ಕರ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣನಾಯ್ಕ ಧನ್ಯವಾದವಿತ್ತರು. ನಿವೃತ್ತ ಮುಖ್ಯೋಪಾಧ್ಯಾಯ ಬಿ. ಸೋಮಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English