ಭಟ್ಕಳ : ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಂಕಿ ಠಾಣೆಯ ಪಿಎಸ್ಐ ಅಭಿನಂದನ ಗೌಡ ಅವರ ವಿರುದ್ಧ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಜುಲೈ 4ರ ರಾತ್ರಿ ಸಂತ್ರಸ್ತ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಭಟ್ಕಳ ನಗರ ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಆರೋಪಿ ಪಿಎಸ್ಐ ಬಾಲಕಿಯನ್ನು ಮೊಬೈಲ್ ಕರೆ ಮತ್ತು ಸಂದೇಶಗಳ ಮೂಲಕ ಸಂಪರ್ಕಿಸಿ, ಆಕೆಯ ವಿಶ್ವಾಸವನ್ನು ಗೆಲ್ಲಲು ಆರ್ಥಿಕ ಸಹಾಯವನ್ನೂ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸ್ನೇಹದ ನೆಪದಲ್ಲಿ ಆಕೆಯನ್ನು ನಂಬಿಸಿ, ಮೇ 31ರಂದು ಅಪ್ಪರಕೊಂಡದಲ್ಲಿ ನಡೆದ ತನ್ನ ತಂಗಿಯ ಮಗುವಿನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದನು.
ಕಾರ್ಯಕ್ರಮದ ಬಳಿಕ ಆಕೆಯನ್ನು ಭಟ್ಕಳ ಬಸ್ ನಿಲ್ದಾಣದ ಸಮೀಪವಿರುವ ಖಾಸಗಿ ಲಾಡ್ಜ್ಗೆ ಕರೆದೊಯ್ದು, ಅಲ್ಲಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಘಟನೆಯ ಕುರಿತು ದೂರು ದಾಖಲಾದ ಬೆನ್ನಲ್ಲೇ ಭಟ್ಕಳ ನಗರ ಪೊಲೀಸ್ ಇನ್ಸ್ಪೆಕ್ಟರ್ ಅವರು ಆರೋಪಿತ ಪಿಎಸ್ಐನನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮತ್ತು ವಿಚಾರಣೆಯನ್ನು ಮುಂದುವರಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










