ಉಡುಪಿ : ಹಾವಂಜೆ ಗ್ರಾಮದ ಗೋಳಿಕಟ್ಟೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಬಹುದಾಗಿದ್ದ ಭೀಕರ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಜನದಟ್ಟಣೆ ಇರುವ ಸಮಯದಲ್ಲಿ ಬೃಹತ್ ಮರವೊಂದು ಹಠಾತ್ತನೆ ಮುಖ್ಯ ರಸ್ತೆಗೆ ಉರುಳಿ ಬಿದ್ದಿದ್ದು, ಈ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರಿನ ಹಿಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ.
ಸ್ಥಳೀಯ ನಿವಾಸಿಯೂ ಆಗಿರುವ ಅರಣ್ಯ ಇಲಾಖೆ ಅಧಿಕಾರಿ ದೇವರಾಜ್ ಅವರು ಸೋಮವಾರ ಬೆಳಿಗ್ಗೆ ಎಂದಿನಂತೆ ತಮ್ಮ ಕಾರಿನಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಇವರು ಗೋಳಿಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ರಸ್ತೆ ಬದಿಯಲ್ಲಿದ್ದ ಬೃಹತ್ ಮರವೊಂದು ಅನಿರೀಕ್ಷಿತವಾಗಿ ಇವರ ವಾಹನದ ಮೇಲೆ ಉರುಳಿದೆ. ಕಾರು ಸ್ವಲ್ಪ ಮುಂದೆ ಚಲಿಸಿದ್ದರೂ ಮರವು ನೇರವಾಗಿ ಚಾಲಕರ ಸೀಟಿನ ಮೇಲೆಯೇ ಬೀಳುವ ಸಾಧ್ಯತೆಯಿತ್ತು. ದೇವರಾಜ್ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳದ ಪಕ್ಕದಲ್ಲೇ ಬಸ್ ನಿಲ್ದಾಣವಿದ್ದು, ಸದಾ ವಾಹನ ಸಂಚಾರ ಹಾಗೂ ಸಾರ್ವಜನಿಕ ಚಟುವಟಿಕೆಗಳಿಂದ ಕೂಡಿರುತ್ತದೆ. ಒಂದು ವೇಳೆ ಮರವು ಬಸ್ ತಂಗುದಾಣದ ಮೇಲೆ ಅಥವಾ ಹೆಚ್ಚು ಜನರು ನೆರೆದಿದ್ದ ಜಾಗದಲ್ಲಿ ಬಿದ್ದಿದ್ದರೆ ದೊಡ್ಡ ಮಟ್ಟದ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು. ಸದ್ಯ ಭಾರಿ ಅನಾಹುತವೊಂದು ತಪ್ಪಿದಂತಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸಂಕ್ಷಿಪ್ತ ಮುಖ್ಯಾಂಶಗಳು, ಸುದ್ದಿಗಳು









