ಮಂಗಳೂರು : ಡಾನ್ ಬಾಸ್ಕೋ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಪ್ರಥಮ ಪಿಂಚಣಿದಾರರ ಸಮಾವೇಶ ಜರುಗಿತು. ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕಲ್ಯಾಣ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಡಿ. ಚನ್ನಣ್ಣನವರ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿ ವರ್ಗವು ಶೋಷಿತರ ಮತ್ತು ನೊಂದವರ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದರು. ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಕಚೇರಿಗಳಿಗೆ ಅಲೆಯುವ ಸ್ಥಿತಿ ಬರಬಾರದು. 1996ರ ಸುದೀರ್ಘ ಹೋರಾಟದ ಫಲವಾಗಿ ರೂಪುಗೊಂಡ ಈ ಮಂಡಳಿಯ ಸೌಲಭ್ಯಗಳು ಪ್ರತಿಯೊಬ್ಬ ಕಾರ್ಮಿಕನಿಗೂ ನೇರವಾಗಿ ತಲುಪಬೇಕು ಎಂದರು.
ಮಂಡಳಿಯ ಮುಂದಿನ ಯೋಜನೆಗಳ ಕುರಿತು ವಿವರಿಸಿದ ಅವರು, ಆಗಸ್ಟ್ 1ರಿಂದ ಜಿಲ್ಲಾವಾರು ಜಾಗೃತಿ ಸಮಾವೇಶಗಳು ಹಾಗೂ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅಭಿಯಾನ ಆರಂಭವಾಗಲಿದೆ ಎಂದು ತಿಳಿಸಿದರು. ಕಾರ್ಮಿಕರ ಮಕ್ಕಳ ಶಿಕ್ಷಣ ಧನಸಹಾಯವನ್ನು ಹೆಚ್ಚಿಸುವುದು, ತಾಂತ್ರಿಕ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಶ್ವತ ತರಬೇತಿ ಯೋಜನೆ ತರುವುದು ಮತ್ತು ಮಾಸಿಕ ಪಿಂಚಣಿಯನ್ನು 3,000 ರೂ.ನಿಂದ 5,000 ರೂ.ಗೆ ಏರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು. ಬಾಕಿ ಇರುವ ಪಿಂಚಣಿ ಅರ್ಜಿಗಳ ಶೀಘ್ರ ವಿಲೇವಾರಿಗೆ ‘ಅದಾಲತ್’ ನಡೆಸುವುದು ಹಾಗೂ ವೈದ್ಯಕೀಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯಾ ಸುಲ್ತಾನ್ ಮಾತನಾಡಿ, ಸೂಕ್ತ ದಾಖಲೆಗಳ ಕೊರತೆಯಿಂದ ಸೌಲಭ್ಯಗಳಿಂದ ವಂಚಿತರಾಗದಂತೆ ಕಾರ್ಮಿಕರು ನವೀಕರಣ ಹಾಗೂ ದಾಖಲೆ ಸಲ್ಲಿಕೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎಂದು ಸಲಹೆ ನೀಡಿದರು. ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಬೆವರು ಹರಿಸುವ ಕಟ್ಟಡ ಕಾರ್ಮಿಕರ ಭದ್ರತೆ ಮತ್ತು ಸುರಕ್ಷತೆ ಅತ್ಯಂತ ಮುಖ್ಯ ಎಂದು ಪ್ರತಿಪಾದಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹಾಗೂ ಫೆಡರೇಷನ್ ರಾಜ್ಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶದಲ್ಲಿ ರಾಜ್ಯದ 20 ಜಿಲ್ಲೆಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಪಿಂಚಣಿದಾರರು ಪಾಲ್ಗೊಂಡಿದ್ದರು. ನಂತರ ನಡೆದ ಸಂವಾದದಲ್ಲಿ 10 ಪ್ರಮುಖ ಬೇಡಿಕೆಗಳ ಮನವಿಯನ್ನು ಸಿಇಒ ಅವರಿಗೆ ಸಲ್ಲಿಸಲಾಯಿತು. ಮಧ್ಯಾಹ್ನದ ನಂತರ ವಸಂತ್ ಆಚಾರಿ ಮಂಡಿಸಿದ 10 ಅಂಶಗಳ ಕರಡು ಪ್ರಸ್ತಾವನೆಯ ಮೇಲೆ ಗಂಭೀರ ಚರ್ಚೆ ನಡೆಯಿತು.
ಸಮಾವೇಶದಲ್ಲಿ ಆಗಸ್ಟ್ 10ರ ಜೈಲ್ ಭರೋ ಹಾಗೂ ಸೆಪ್ಟೆಂಬರ್ 8ರ ಬೆಂಗಳೂರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಪೂರ್ಣ ಬೆಂಬಲ ವ್ಯಕ್ತಪಡಿಸಲಾಯಿತು. ಇದೇ ವೇಳೆ ವಸಂತ್ ಆಚಾರಿ ಅವರ ಸಂಚಾಲಕತ್ವದಲ್ಲಿ 31 ಸದಸ್ಯರ ನೂತನ ರಾಜ್ಯ ಸಂಘಟನಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಲಿಂಗರಾಜ್ ನಿರೂಪಿಸಿದರೆ, ಯೋಗೀಶ್ ಜಪ್ಪಿನಮೊಗರು ಧನ್ಯವಾದ ಸಮರ್ಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










