ಬೆಳ್ತಂಗಡಿ : ಕಟಪಾಡಿಯಿಂದ ಕಳುವಾಗಿದ್ದ ಮೊಹಮ್ಮದ್ ಆಸಿಫ್ ಎಂಬವರಿಗೆ ಸೇರಿದ ಆಟೋರಿಕ್ಷಾವೊಂದು ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿ ಕಳವಾಗಿದ್ದ ಈ ವಾಹನವನ್ನು ದುಷ್ಕರ್ಮಿಗಳು ಬೆಳ್ತಂಗಡಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಮೂರು ಮಾರ್ಗದ ಹೋಟೆಲ್ ಒಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಆಟೋರಿಕ್ಷಾವನ್ನು ಗಮನಿಸಿದ ಸ್ಥಳೀಯರು ಕೂಡಲೇ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಗೆ ವಿಷಯ ತಿಳಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಾಹನದ ನೋಂದಣಿ ಸಂಖ್ಯೆಯನ್ನು ಆ್ಯಪ್ ಮೂಲಕ ಪರಿಶೀಲಿಸಿದಾಗ, ಅದು ಕಟಪಾಡಿಯ ಆಸಿಫ್ಗೆ ಸೇರಿದ್ದು ಎಂದು ದೃಢಪಟ್ಟಿತು. ತಕ್ಷಣ ಮಾಲೀಕರನ್ನು ಸಂಪರ್ಕಿಸಿದ ಪೊಲೀಸರು, ಅವರನ್ನು ಬೆಳ್ತಂಗಡಿಗೆ ಕರೆಸಿ ವಾಹನವನ್ನು ಹಸ್ತಾಂತರಿಸಿದರು.
ಭಾನುವಾರ ಸಂಜೆ ಕುಟುಂಬದೊಂದಿಗೆ ಬೀಚ್ಗೆ ಹೋಗಿ ಬಂದಿದ್ದ ಮಾಲೀಕರು, ಆಟೋರಿಕ್ಷಾದ ಕೀಲಿಯನ್ನು ವಾಹನದ ಒಳಗೇ ಮರೆತು ಬಂದಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳ, ಕೀಲಿಯನ್ನು ಬಳಸಿ ಸುಲಭವಾಗಿ ವಾಹನವನ್ನು ಕದ್ದೊಯ್ದಿದ್ದಾನೆ ಎಂದು ಶಂಕಿಸಲಾಗಿದೆ.
ಗ್ಯಾಸ್ ಇಂಧನದಲ್ಲಿ ಚಲಿಸುತ್ತಿದ್ದ ಈ ಆಟೋರಿಕ್ಷಾ, ಬೆಳ್ತಂಗಡಿ ತಲುಪುವಷ್ಟರಲ್ಲಿ ಇಂಧನ ಖಾಲಿಯಾದ ಕಾರಣ ದುಷ್ಕರ್ಮಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಾಹನದ ಒಳಭಾಗದಲ್ಲಿ ಡಿಜೇಲ್ ಕ್ಯಾನ್ ಮತ್ತು ಬೀಗ ಪತ್ತೆಯಾಗಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










