ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಭೂಕುಸಿತ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯವು, ಈ ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಸಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಉತ್ತರಿಸುವಂತೆ ಕಟ್ಟುನಿಟ್ಟಿನ ಆದೇಶದೊಂದಿಗೆ ತುರ್ತು ನೋಟಿಸ್ ನೀಡಿದೆ.
ಕಳೆದ 2025ರ ಮೇ 30ರಂದು ಮುಂಜಾನೆ ಸಂಭವಿಸಿದ ಈ ದುರಂತದಲ್ಲಿ ಅಮೂಲ್ಯ ಜೀವಹಾನಿಯಾಗಿದ್ದಲ್ಲದೆ, ಅಶ್ವಿನಿ ಎಂಬ ಯುವತಿ ತೀವ್ರವಾಗಿ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ತುತ್ತಾಗಿದ್ದರು. ಅಲ್ಲಿನ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಈ ಕೃತಕ ಭೂಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಪ್ರಕ್ರಿಯೆ ಹಾಗೂ ದುರಂತಕ್ಕೆ ಇರುವ ನೇರ ಲಿಂಕ್ ಬಗ್ಗೆ ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ಅರ್ಜಿಯಲ್ಲಿ ಪ್ರಮುಖವಾಗಿ ವಿನಂತಿಸಲಾಗಿದೆ.
ಅಲ್ಲಿ ನಡೆದಿರುವ ರಸ್ತೆ ನಿರ್ಮಾಣದ ವೇಳೆ ಭಾರತೀಯ ರಸ್ತೆ ಕಾಂಗ್ರೆಸ್ (IRC) ವಿಧಿಸಿರುವ ನಿಯಮಾವಳಿಗಳು ಹಾಗೂ ಇಂಜಿನಿಯರಿಂಗ್ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಸ್ವತಂತ್ರ ಭೂತಾಂತ್ರಿಕ ತಜ್ಞರು ಮತ್ತು ಇಂಜಿನಿಯರ್ಗಳನ್ನೊಳಗೊಂಡ ತನಿಖಾ ಸಮಿತಿಯೊಂದನ್ನು ರಚಿಸಬೇಕು ಎಂದು ಅರ್ಜಿದಾರರು ನ್ಯಾಯಪೀಠದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಈ ಘೋರ ದುರಂತದಿಂದ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ, ಶಾಶ್ವತ ವೈಕಲ್ಯ ಅನುಭವಿಸುತ್ತಿರುವ ಯುವತಿಗೆ ಹಾಗೂ ಮನೆ-ಆಸ್ತಿ ಕಳೆದುಕೊಂಡು ಬೀದಿಪಾಲಾದ ನಿರಾಶ್ರಿತರಿಗೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಧನ ವಿತರಿಸಬೇಕು. ಇದರೊಂದಿಗೆ ಕಾಮಗಾರಿಯಲ್ಲಿ ಬೇಜವಾಬ್ದಾರಿತನ ತೋರಿದ ಗುತ್ತಿಗೆದಾರರು ಹಾಗೂ ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಲಾಗಿದೆ.
ಭವಿಷ್ಯದಲ್ಲಿ ಕರಾವಳಿ ಹಾಗೂ ಮಲೆನಾಡಿನ ಇಳಿಜಾರು ಪ್ರದೇಶಗಳಲ್ಲಿ ಇಂತಹ ಕರಾಳ ದುರಂತಗಳು ಮರುಕಳಿಸದಂತೆ ತಡೆಯಲು ವೈಜ್ಞಾನಿಕ ಇಳಿಜಾರು ಸ್ಥಿರೀಕರಣ (Slope Stabilization) ತಂತ್ರಜ್ಞಾನ ಅಳವಡಿಸಬೇಕು. ಸೂಕ್ತ ತಡೆಗೋಡೆಗಳ ನಿರ್ಮಾಣ ಹಾಗೂ ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತ ಡ್ರೈನೇಜ್ ವ್ಯವಸ್ಥೆಯನ್ನು ರೂಪಿಸಲು ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಲಾಗಿದ್ದು, ಮುಂದಿನ ವಿಚಾರಣೆಯು ಭಾರೀ ಕುತೂಹಲ ಮೂಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










