ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಆರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 18ರ ಶನಿವಾರದಂದು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಸಾರಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯದಿಂದ ಈ ಕುರಿತು ತುರ್ತು ಪ್ರಕಟಣೆ ಹೊರಬಿದ್ದಿದೆ.
ಜಿಲ್ಲಾಧಿಕಾರಿಗಳ ಅಧಿಕೃತ ಆದೇಶದ ಪ್ರಕಾರ, ಜುಲೈ 18ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಇರಲಿದೆ. ಇದರೊಂದಿಗೆ ವಸತಿ ಶಾಲೆಗಳು, ಪದವಿ ಪೂರ್ವ (ಪಿಯುಸಿ) ಮತ್ತು ಪಿಯು ವಸತಿ ಕಾಲೇಜುಗಳು ಸೇರಿದಂತೆ 12ನೇ ತರಗತಿಯವರೆಗಿನ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೂ ಈ ರಜೆ ಅನ್ವಯಿಸಲಿದೆ. ಈ ಸರ್ಕಾರಿ ನಿರ್ದೇಶನವನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ರ ನಿಯಮಗಳ ಅಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಡಳಿತ ಮಂಡಳಿಗಳಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ.
ಮಳೆಯ ತೀವ್ರತೆಯಿಂದ ಉಂಟಾಗಬಹುದಾದ ಪ್ರಾಣಹಾನಿ ಮತ್ತು ಅನಾಹುತಗಳನ್ನು ತಡೆಗಟ್ಟಲು ಜಿಲ್ಲಾಡಳಿತವು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಯಾವುದೇ ಕಾರಣಕ್ಕೂ ನದಿ ತೀರ, ಸಮುದ್ರ ಕಿನಾರೆಗಳು ಹಾಗೂ ಜಲಪಾತಗಳತ್ತ ತೆರಳದಂತೆ ನಿಷೇಧ ಹೇರಲಾಗಿದೆ. ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ನೀರು ತುಂಬಿರುವ ತಗ್ಗು ಪ್ರದೇಶಗಳು, ಕೆರೆ ಹಾಗೂ ಹಳ್ಳಕೊಳ್ಳಗಳ ಬಳಿ ಹೋಗದಂತೆ ನಿಗಾ ವಹಿಸಬೇಕು ಎಂದು ಕರೆಯಿ ನೀಡಲಾಗಿದೆ. ಅಲ್ಲದೆ, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂತ್ರಸ್ತರಿಗಾಗಿ ತಕ್ಷಣವೇ ಕಾಳಜಿ ಕೇಂದ್ರಗಳನ್ನು ಸಜ್ಜುಗೊಳಿಸಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಉನ್ನತ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಇರಬೇಕೆಂದು ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಲು ವ್ಯವಸ್ಥೆ ಮಾಡಲಾಗಿದೆ. ಮಳೆ ಹಾಗೂ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ತುರ್ತು ನೆರವು ಅಥವಾ ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆಗಳಾದ ಉಚಿತ ಕರೆ ಸಂಖ್ಯೆ 1077 ಅಥವಾ ಭೂದೂರವಾಣಿ ಸಂಖ್ಯೆ 0824-2442590 ಅನ್ನು ಸಂಪರ್ಕಿಸಬಹುದಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










