ಮಂಗಳೂರು : ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಸರ್ಕಾರದ ದ್ವಂದ್ವ ನೀತಿಯಿಂದಾಗಿ ಒಂದೆಡೆ ತಕ್ಷಣವೇ ಕಠಿಣ ಕ್ರಮಗಳನ್ನು ಜರುಗಿಸಲಾಗುತ್ತಿದ್ದರೆ, ಮತ್ತೊಂದೆಡೆ ಸಮಾಜಘಾತುಕ ಕೃತ್ಯಗಳ ವಿರುದ್ಧ ನಿಗೂಢ ಮೌನ ವಹಿಸಲಾಗುತ್ತಿದೆ. ಆಡಳಿತ ಮಂಡಳಿಯ ಇಂತಹ ತಾರತಮ್ಯ ಧೋರಣೆಯು ಜನಸಾಮಾನ್ಯರಲ್ಲಿ ಭಾರಿ ಆತಂಕ ಮೂಡಿಸಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇತ್ತೀಚೆಗೆ ಪುತ್ತೂರು ತಾಲೂಕಿನಲ್ಲಿ ಯುವತಿಯೊಬ್ಬಳಿಗೆ ಚೂರಿ ಇರಿಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಅನಾವಶ್ಯಕವಾಗಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಹಾಗೂ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಹೊರಿಸಿ ಪೊಲೀಸರೇ ಮುಂದೆ ನಿಂತು ಹಲವರ ವಿರುದ್ಧ ಸ್ವಯಂ ಪ್ರೇರಿತ (ಸುಮೊಟೊ) ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಬಂಟ್ವಾಳದಲ್ಲಿ ನಡುಹಗಲಿನಲ್ಲಿ ಯುವತಿಯನ್ನು ಸಾರ್ವಜನಿಕವಾಗಿ ಬರ್ಬರವಾಗಿ ಕೊಲೆ ಮಾಡಿದ ಕರಾಳ ಕೃತ್ಯ ನಡೆದ ಬಳಿಕ, ಜವಾಬ್ದಾರಿಯರಿತು ವರ್ತಿಸಬೇಕಾದ ಕೆಲವರು ಹಿಂದೂ ಸಂಘಟನೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತಮಗಿಷ್ಟ ಬಂದಂತೆ ಅತ್ಯಂತ ಕೀಳಾಗಿ ಬರೆದು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಷ್ಟೆಲ್ಲಾ ದುರುದ್ದೇಶಪೂರ್ವಕ ಅಪಪ್ರಚಾರ ನಡೆಯುತ್ತಿದ್ದರೂ ಕಾನೂನು ಸುವ್ಯವಸ್ಥೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಾಸಕರು ಪ್ರಶ್ನಿಸಿದ್ದಾರೆ.
ಬಂಟ್ವಾಳದ ಕೊಲೆ ಪ್ರಕರಣವನ್ನು ಬಳಸಿಕೊಂಡು ಅನಾವಶ್ಯಕವಾಗಿ ಆರೋಪಿತ ಯುವಕನನ್ನು ಹಿಂದೂ ಸಂಘಟನೆಯೊಂದಿಗೆ ತಳುಕು ಹಾಕುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರಿಗೆ ಮಸಿ ಬಳಿಯುವ ಏಕೈಕ ಉದ್ದೇಶದಿಂದ ವಾಟ್ಸಾಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಾಮರಸ್ಯ ಕದಡುವ ಮತ್ತು ದ್ವೇಷ ಬಿತ್ತುವಂತಹ ನಕಲಿ ಸಂದೇಶಗಳನ್ನು ಲಜ್ಜೆಯಿಲ್ಲದೆ ವೈರಲ್ ಮಾಡಲಾಗುತ್ತಿದೆ. ಇಂತಹ ಸೂಕ್ಷ್ಮ ಸನ್ನಿವೇಶ ಎದುರಾಗಿದ್ದರೂ ಸಹ ರಾಜ್ಯ ಸರ್ಕಾರವಾಗಲಿ ಅಥವಾ ಗೃಹ ಸಚಿವರಾಗಲಿ ಕಿಡಿಗೇಡಿಗಳ ವಿರುದ್ಧ ಯಾವುದೇ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಮೌನ ಪ್ರೇಕ್ಷಕರಂತೆ ಕುಳಿತಿರುವುದು ಅತ್ಯಂತ ಖಂಡನೀಯ ಎಂದು ಅವರು ಗುಡುಗಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಗಂಭೀರ ಸ್ವರೂಪದ ಅಪರಾಧ ಕೃತ್ಯಗಳು ಮಿತಿಮೀರಿ ಹೆಚ್ಚುತ್ತಿದ್ದು, ಹೆಣ್ಣುಮಕ್ಕಳು ಸೇರಿದಂತೆ ನಾಗರಿಕರು ರಸ್ತೆಗಿಳಿದು ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗದಂತಹ ಭೀಕರ ಸ್ಥಿತಿ ನಿರ್ಮಾಣವಾಗಿದೆ. ಜನಸಾಮಾನ್ಯರ ಪ್ರಾಣ ಹಾಗೂ ಆಸ್ತಿಪಾಸ್ತಿಗೆ ರಕ್ಷಣೆ ನೀಡಲು ಸಾಧ್ಯವಾಗದ ಇಂದಿನ ಸರ್ಕಾರವು ಆಡಳಿತ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ತೀವ್ರವಾಗಿ ಟೀಕಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










