ಕಾರ್ಕಳ : ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ನ್ಯಾಯ ಕೋರಿ ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯನ್ನು ದಮನ ಮಾಡಲು ಆಡಳಿತ ವ್ಯವಸ್ಥೆಯು ಬಲಪ್ರಯೋಗ ನಡೆಸಿರುವುದು ಅತ್ಯಂತ ಅಘಾತಕಾರಿ ಹಾಗೂ ಖಂಡನೀಯ ಕೃತ್ಯವಾಗಿದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಈ ದೇಶದ ಪ್ರಗತಿಯ ದಿಕ್ಸೂಚಿ ಹಾಗೂ ನಾಳೆಯ ಆಶಾಕಿರಣವಾಗಿದ್ದಾರೆ. ಅವರು ಯಾವುದೇ ರಾಜಕೀಯ ಲಾಭಕ್ಕಾಗಲಿ ಅಥವಾ ಅಧಿಕಾರಕ್ಕಾಗಲಿ ಈ ಹೋರಾಟ ಮಾಡುತ್ತಿಲ್ಲ, ಬದಲಾಗಿ ತಮ್ಮ ಅಹೋರಾತ್ರಿ ಪರಿಶ್ರಮ, ಶಿಕ್ಷಣ ಹಾಗೂ ಭವಿಷ್ಯಕ್ಕೆ ನ್ಯಾಯ ಸಿಗಲಿ ಎಂಬ ಏಕೈಕ ನ್ಯಾಯಯುತ ಬೇಡಿಕೆಯನ್ನಿಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ. ಇಂತಹ ನೈಜ ಕಳಕಳಿಯ ಪ್ರತಿಭಟನೆಯನ್ನು ಆಲಿಸಿ ಸಮಾಧಾನಪಡಿಸುವ ಬದಲು ಅವರ ಮೇಲೆ ಪೋಲಿಸ್ ಬಲಪ್ರಯೋಗ ನಡೆಸಿರುವುದು ಭಾರತದ ಸುದೀರ್ಘ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕಪ್ಪುಚುಕ್ಕೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಆಡಳಿತ ಚುಕ್ಕಾಣಿ ಹಿಡಿದಿರುವ ಸರ್ಕಾರಗಳು ಸಾರ್ವಜನಿಕರ ಹಾಗೂ ಯುವಜನತೆಯ ಕಷ್ಟ-ನಷ್ಟಗಳಿಗೆ ತಕ್ಷಣವೇ ಸ್ಪಂದಿಸುವ ವಿಶಾಲ ಮನೋಭಾವವನ್ನು ಹೊಂದಿರಬೇಕು. ಆದರೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಆಡಳಿತ ವ್ಯವಸ್ಥೆಯು ತನ್ನ ವೈಫಲ್ಯಗಳನ್ನು ಪ್ರಶ್ನೆ ಮಾಡುವ ಪ್ರತಿಯೊಬ್ಬ ನಾಗರಿಕನನ್ನು, ವಿದ್ಯಾರ್ಥಿಯನ್ನು ‘ದೇಶದ್ರೋಹಿ’ ಎಂದು ಬಿಂಬಿಸುತ್ತಿರುವುದು ಅತ್ಯಂತ ಅಸಹನೀಯ ಹಾಗೂ ದ್ವೇಷಪೂರಿತ ಪ್ರವೃತ್ತಿಯಾಗಿದೆ. ತಮ್ಮ ಹಕ್ಕಿಗಾಗಿ ಧ್ವನಿಯೆತ್ತಿದ ಮುಗ್ಧ ವಿದ್ಯಾರ್ಥಿಗಳನ್ನು ಸ್ವಾರ್ಥ ರಾಜಕೀಯ ಲಾಭಕ್ಕಾಗಿ ದೇಶದ್ರೋಹಿಗಳೆಂದು ಕರೆಯುವುದು ನಮ್ಮ ದೇಶದ ಸಾಮಾಜಿಕ ಸೌಹಾರ್ದತೆ, ಐಕ್ಯತೆ ಹಾಗೂ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಮಾರಕವಾದ ಬೆಳವಣಿಗೆಯಾಗಿದೆ. ಇಂದಿನ ಶ್ರಮಿಕ ವಿದ್ಯಾರ್ಥಿಗಳೇ ನಾಳೆಯ ಭಾರತವನ್ನು ಮುನ್ನಡೆಸುವ ಜವಾಬ್ದಾರಿಯುತ ಪ್ರಜೆಗಳು ಎಂಬುದನ್ನು ಕೇಂದ್ರ ಸರ್ಕಾರ ಎಂದಿಗೂ ಮರೆಯಬಾರದು ಎಂದು ಮುನಿಯಾಲು ಎಚ್ಚರಿಸಿದ್ದಾರೆ.
ಭಾರತವು ಸಂವಿಧಾನಬದ್ಧವಾಗಿ ನಡೆಯುವ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮ ಪವಿತ್ರ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನಗೆ ಆಗುವ ಅನ್ಯಾಯದ ವಿರುದ್ಧ ಶಾಂತಿಯುತವಾಗಿ ಧ್ವನಿಯೆತ್ತುವ ಮತ್ತು ಪ್ರತಿಭಟಿಸುವ ಮೂಲಭೂತ ಹಕ್ಕನ್ನು ನೀಡಿದೆ. ಆದ್ದರಿಂದ ನಿಯಮಬದ್ಧವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಶಾಂತಿಯುತ ಚಳವಳಿಯ ಮೇಲೆ ಬಲಪ್ರಯೋಗ ಮಾಡಿದ್ದನ್ನು ಯಾವುದೇ ನಾಗರಿಕ ಸಮಾಜ ಅಥವಾ ಸರ್ಕಾರ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರವು ತನ್ನ ಪಟ್ಟು ಸಡಿಲಿಸಿ, ಹಠಮಾರಿತನವನ್ನು ಬದಿಗೊತ್ತಿ, ತಕ್ಷಣವೇ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಅವರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು. ಅಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ತುರ್ತು ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉದಯ ಶೆಟ್ಟಿ ಮುನಿಯಾಲು ಒತ್ತಾಯಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










