ಹಾಸನ : ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಸೋಮವಾರ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ರಂಗನಾಥ ಸ್ವಾಮಿ ಬೆಟ್ಟದ ಪಾದಗಟ್ಟೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಗೂ ಒಕ್ಕಲಿಗ ಸಂಪ್ರದಾಯದ ಪ್ರಕಾರ ನೆರವೇರಿತು. ಪಕ್ಷಾತೀತವಾಗಿ ರಾಜ್ಯದ ವಿವಿಧ ರಾಜಕೀಯ ರಂಗದ ಪ್ರಮುಖ ನಾಯಕರು, ಸಚಿವರು, ಶಾಸಕರು ಹಾಗೂ ಸಹಸ್ರಾರು ಅಭಿಮಾನಿಗಳು ಮಾವಿನಕೆರೆಗೆ ಆಗಮಿಸಿ ಅಗಲಿದ ಹಿರಿಯ ಜೀವಕ್ಕೆ ಅಂತಿಮ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಮುಖ ಬಿಜೆಪಿ ಮತ್ತು ಕಾಂಗ್ರೆಸ್ ಧುರೀಣರು ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಶಾಸಕ ಎಚ್.ಡಿ. ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯ ಹಾಗೂ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿದವು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಸೇರಿದಂತೆ ಹಿರಿಯ ಆಡಳಿತಾಧಿಕಾರಿಗಳು ಹಾಗೂ ಸಾರ್ವಜನಿಕರು ಅಂತಿಮ ದರ್ಶನ ಪಡೆದರು. ಕಳೇಬರಕ್ಕೆ ಅಂತಿಮ ನಮನ ಸಲ್ಲಿಸುವ ಭಾಗವಾಗಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ಇದೇ ವೇಳೆ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಗೌರವಪೂರ್ವಕವಾಗಿ ಹಸ್ತಾಂತರಿಸಿದರು.
1954ರಲ್ಲಿ ದೇವೇಗೌಡರೊಂದಿಗೆ ವಿವಾಹಬಂಧನಕ್ಕೆ ಕಾಲಿಟ್ಟಿದ್ದ ಚೆನ್ನಮ್ಮ ಅವರು ನಾಲ್ವರು ಗಂಡು ಮಕ್ಕಳಾದ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ, ಎಚ್.ಡಿ. ಬಾಲಕೃಷ್ಣ, ಎಚ್.ಡಿ. ರಮೇಶ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದೇಶದ ಅತ್ಯುನ್ನತ ರಾಜಕೀಯ ಕುಟುಂಬದ ಗೃಹಿಣಿಯಾಗಿದ್ದರೂ, ಚೆನ್ನಮ್ಮ ಅವರು ತಮ್ಮ ಜೀವಿತಾವಧಿಯುದ್ದಕ್ಕೂ ಸಾರ್ವಜನಿಕ ಬೆಳಕಿನಿಂದ ದೂರ ಉಳಿದು ಸರಳ ಜೀವನ ನಡೆಸಿದ್ದರು. ಇನ್ನು ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಅವರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಅಜ್ಜಿ ಅಂತ್ಯಕ್ರಿಯೆಯ ಅಂತಿಮ ದರ್ಶನ ಪಡೆಯಲು ಜೈಲಾಧಿಕಾರಿಗಳು ವಿಶೇಷ ಅನುಮತಿ ನೀಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಸುದ್ದಿಗಳು










