ಮಂಗಳೂರು : ರಾಜ್ಯ ಸರಕಾರವು ಪ್ರಮುಖ ಐಎಎಎಸ್ ಮತ್ತು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ. ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ರಾಹುಲ್ ರತ್ನಂ ಪಾಂಡೆ (ಐಎಎಎಸ್) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವರ್ಗಾಯಿಸಲಾಗಿದೆ. ಇದುವರೆಗೆ ಈ ಹುದ್ದೆಯಲ್ಲಿದ್ದ ರವಿಚಂದ್ರ ನಾಯಕ್ (ಕೆಎಎಸ್) ಅವರ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ. ರಾಹುಲ್ ರತ್ನಂ ಪಾಂಡೆ ಅವರು ಈ ಮೊದಲು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (KSMSCL) ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರಾಗಿದ್ದ ರವಿ ಕುಮಾರ್ ಎಂ.ಆರ್. (ಐಎಎಎಸ್) ಅವರನ್ನು ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ. ಹಾಲಿ ಜಿಲ್ಲಾಧಿಕಾರಿಯಾಗಿರುವ ಡಾ. ರವಿ ಎಂ.ಆರ್. ಅವರು ಜುಲೈ 31 ರಂದು ವಯೋನಿವೃತ್ತಿ ಹೊಂದಲಿದ್ದು, ಅವರ ತೆರವಾಗುವ ಸ್ಥಾನಕ್ಕೆ ರವಿ ಕುಮಾರ್ ಎಂ.ಆರ್. ಅವರು ಆಗಸ್ಟ್ 1 ರಿಂದ ಅನ್ವಯವಾಗುವಂತೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇನ್ನು, ಸ್ಥಳನಿಯುಕ್ತಿಗಾಗಿ ಕಾಯುತ್ತಿದ್ದ ಅರ್ಥಶಾಸ್ತ್ರ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎ.ಆರ್. ರವಿ ಅವರನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ (KSMSCL) ನೂತನ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










