ಮಂಗಳೂರು : ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕನ ಶ್ರಮದ ಮೌಲ್ಯವೇ ಪ್ರಧಾನವಾಗಿದ್ದು,ಅದರ ಅಧಾರದಲ್ಲಿಯೇ ಆರ್ಥಿಕ ಚಕ್ರ ತಿರುಗಲು ಸಾಧ್ಯವಾಗುತ್ತದೆ. ಆದರೆ ಆಳುವ ವರ್ಗಗಳು ಕಾರ್ಮಿಕ ವರ್ಗದ ಶ್ರಮಕ್ಕೆ ಎಳ್ಳಷ್ಟೂ ಪ್ರಾಮುಖ್ಯತೆ ನೀಡದೆ ತಮ್ಮ ಲಾಭಕೋರತನದ ಹೆಚ್ಚಳಕ್ಕೆ ಜೋತು ಬಿದ್ದಿದೆ. ಇದರಿಂದಾಗಿ ಕನಿಷ್ಠ ವೇತನ ಎಂಬುದು ಮರೀಚಿಕೆಯಾಗಿದೆ. ಅದರೂ ಕರ್ನಾಟಕ ರಾಜ್ಯದಲ್ಲಿ ಕನಿಷ್ಠ ವೇತನಕ್ಕೆ ಸಂಬಂಧಿಸಿ ಕಳೆದ ಹಲವು ದಶಕಗಳಿಂದ ಸಮರಶೀಲ ಹೋರಾಟ ನಡೆಸಿದ್ದರ ಪ್ರತಿಫಲವಾಗಿ ರಾಜ್ಯ ಸರಕಾರ ಮೇ 22 ರಂದು ಕನಿಷ್ಠ ಕೂಲಿಯನ್ನು ಘೋಷಣೆ ಮಾಡಿದ್ದರೂ ಇಂದಿನವರೆಗೂ ಜಾರಿಗೊಳಿಸಿಲ್ಲ.ಆದಷ್ಟು ಶೀಘ್ರದಲ್ಲಿ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಭಾರೀ ಹೋರಾಟವನ್ನು ಎದುರಿಸಬೇಕಾದೀತು ಎಂದು ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರರಾದ ಜೆ ಬಾಲಕೃಷ್ಣ ಶೆಟ್ಟಿಯವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಅವರು ಇಂದು (26-07-2026) ಗುರುಪುರ ಕೈಕಂಬದ ಮಾತಾಕೃಪಾ ಹಾಲ್ ನಲ್ಲಿ CITU ನೇತೃತ್ವದಲ್ಲಿ ಜರುಗಿದ ಗುರುಪುರ ವಲಯ ಮಟ್ಟದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸುತ್ತಾ ಈ ಮಾತುಗಳನ್ನು ಹೇಳಿದರು.
ಸಮಾವೇಶಕ್ಕೆ ಶುಭಕೋರಿ ಮಾತನಾಡಿದ ಜಿಲ್ಲೆಯ ರೈತ ಕಾರ್ಮಿಕ ಮುಖಂಡರಾದ ಸದಾಶಿವದಾಸ್ ರವರು ಜಿಲ್ಲೆಯ ಕಾರ್ಮಿಕ ಚಳುವಳಿಯ ಚರಿತ್ರೆಯನ್ನು ವಿವರಿಸುತ್ತಾ,ದೇಶದ ಕಾರ್ಮಿಕ ಚಳುವಳಿಯನ್ನು ದುರ್ಬಲಗೊಳಿಸಲು ಕೇಂದ್ರ ಸರಕಾರ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿ ಕಾರ್ಮಿಕ ವರ್ಗವನ್ನು ಮತ್ತೆ ಗುಲಾಮರನ್ನಾಗಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಹೇಳಿದರು
ಸಮಾರೋಪ ಭಾಷಣ ಮಾಡಿದ CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ,ದೇಶದ ಕಾರ್ಮಿಕ ಚಳುವಳಿಯಲ್ಲಿ ಧ್ರವತಾರೆಯಾಗಿ ಮಿನುಗುತ್ತಿರುವ CITU ಕಾರ್ಮಿಕ ವರ್ಗದ ಪಕ್ಷಪಾತಿಯಾಗಿದ್ದುಕೊಂಡು ಕಾರ್ಮಿಕರ ಪ್ರತಿಯೊಂದು ಪ್ರಶ್ನೆಗಳನ್ನು ಮುಂದಿಟ್ಟು ನ್ಯಾಯಕ್ಕಾಗಿ ಪ್ರತಿಪಾದಿಸುವ ಏಕೈಕ ಕಾರ್ಮಿಕ ಸಂಘಟನೆಯಾಗಿದೆ.ಎಲ್ಲಾ ವಿಭಾಗದ ಕಾರ್ಮಿಕರು ತಮ್ಮ ಹಕ್ಕುಭಾಧ್ಯತೆಗಳಿಗಾಗಿ CITU ಜೊತೆ ಸೇರಿಕೊಂಡು ವಿಶಾಲ ತಳಹದಿಯಲ್ಲಿ ಜಿಲ್ಲೆಯಲ್ಲಿ ಕಾರ್ಮಿಕ ಚಳುವಳಿಯನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
CITU ಗುರುಪುರ ವಲಯ ಕಾರ್ಯದರ್ಶಿ ನೋಣಯ್ಯ ಗೌಡರವರು ಕಳೆದ 4 ವರ್ಷಗಳ ಕಾಲಾವಧಿಯಲ್ಲಿ ನಡೆದ ಚಟುವಟಿಕೆಗಳ ಹಾಗೂ ಸಂಘಟನಾ ಪರಿಸ್ಥಿತಿಗಳ ಬಗ್ಗೆ ಕರಡು ವರದಿಯನ್ನು ಮಂಡಿಸಿದರು. ಬಳಿಕ ಚರ್ಚೆಗಳು ನಡೆದು,ಕಾರ್ಮಿಕ ವರ್ಗದ ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಸಮಾವೇಶವು ಅಂಗೀಕರಿಸಿತು. ಬಳಿಕ ಮುಂದಿನ ಅವಧಿಗೆ 25 ಮಂದಿಯನ್ನೊಳಗೊಂಡ CITU ಗುರುಪುರ ವಲಯ ಸಮನ್ವಯ ಸಮಿತಿಯನ್ನು ರಚಿಸಲಾಯಿತು.
ವೇದಿಕೆಯಲ್ಲಿ CITU ಜಿಲ್ಲಾ ನಾಯಕರಾದ ವಸಂತಿ ಕುಪ್ಪೆಪದವು, ಭವ್ಯಾ ಮುಚ್ಚೂರುರವರು ಉಪಸ್ಥಿತರಿದ್ದರು.ಸಭೆಯ ಅಧ್ಯಕ್ಷತೆಯನ್ನು CITU ಗುರುಪುರ ವಲಯಾಧ್ಯಕ್ಷರಾದ ಬಾಬು ಪೂಜಾರಿಯವರು ವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










