ಮಂಗಳೂರು : 12 ನೇ ಶತಮಾನದ ವಚನಕಾರ ಹಾಗೂ ಸಾಮಾಜಿಕ ಕ್ರಾಂತಿಯ ಹರಿಕಾರ ಹಡಪದ ಅಪ್ಪಣ್ಣ ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವ ಜೊತೆಗೆ ಅವರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ಮಂಗಳೂರು ಇವರ ಸಹಕಾರದೊಂದಿಗೆ ಬುಧವಾರ ನಗರದ ಉರ್ವಾಸ್ಟೋರ್ ತುಳುಭವನದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ನೀಡಿದ ಆಳ್ವಾಸ್ ಕಾಲೇಜು ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರೀಶ್ ಟಿ.ಜಿ ಮಾತನಾಡಿ, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ನಿಜಸುಖಿ ಬಿರುದಾಂಕಿತ ಹಡಪದ ಅಪ್ಪಣ್ಣನವರಿಗೆ ಸತ್ಯವೆ ಸುಖ, ಮಾತೆಂಬುದು ಜ್ಯೋತಿಲಿರ್ಂಗವಾಗಿತ್ತು. 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಶರಣರಾಗಿ, ಆದರ್ಶ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಹಡಪದ ಅಪ್ಪಣ್ಣನವರು ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಾ ಸಮಾಜಕ್ಕೆ ಮಾದರಿಯಾಗಿದ್ದರು. ಜಾತಿ, ಅಸಮಾನತೆಯನ್ನು ವಿರೋಧಿಸಿ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅವರು ತಮ್ಮ ವಚನಗಳಲ್ಲಿ ಕಾಯಕ ನಿಷ್ಠೆ, ದಾಸೋಹ, ಭಕ್ತಿ, ಆಚಾರ ವಿಚಾರಗಳನ್ನು ಸರಳವಾಗಿ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರೆಡ್ಡಿ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಾಜ ಸಂಘದ ಅಧ್ಯಕ್ಷ ಮಲೇಶ್ ಬಿ., ಹಡಪದ ಅಪ್ಪಣ್ಣ ಸಮಾಜ ಸೇವಾ ಸಮಾಜ ಸಂಘದ ಗೌರವಾಧ್ಯಕ್ಷ ಗುರುರಾಜ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಸ್ವಾಗತಿಸಿ, ಬಬಿತಾ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ನುಡಿನಮನ ಸಲ್ಲಿಸಲಾಯಿತು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










