ಮಂಗಳೂರು : ‘ಹೊಸ ದಿಗಂತ’ ದಿನಪತ್ರಿಕೆಯ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ ‘ನಾರದ ಪುರಸ್ಕಾರ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮ ಭಾರತಿ ಟ್ರಸ್ಟ್ ಹಾಗೂ ಕಲಾದರ್ಶನ ಮಾಸಪತ್ರಿಕೆ ಜಂಟಿಯಾಗಿ ಆದ್ಯ ಸುದ್ದಿ ವಾಹಕ ಮಹರ್ಷಿ ನಾರದರ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಆಲೂರು ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾ ಭವನದಲ್ಲಿ ಆಗಸ್ಟ್ 4 ರಂದು ಸಂಜೆ 4 ಗಂಟೆಗೆ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಆಗಸ್ಟ್ 4 ರಂದು ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ವಹಿಸಲಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಗ್ರಾಮ ಭಾರತಿ ಟ್ರಸ್ಟ್ನ ಅಧ್ಯಕ್ಷ ಹನಿಯ ರವಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಈ ಸಮಾರಂಭದಲ್ಲಿ ಒಟ್ಟು ಒಂಬತ್ತು ಮಂದಿ ಮಾಧ್ಯಮ ಕ್ಷೇತ್ರದ ಸಾಧಕರಿಗೆ ‘ನಾರದ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸುರೇಶ್ ಡಿ. ಪಳ್ಳಿ ಅವರು ಕಳೆದ 19 ವರ್ಷಗಳಿಂದ ‘ಹೊಸ ದಿಗಂತ’ ಪತ್ರಿಕೆಯಲ್ಲಿ ನಿರಂತರವಾಗಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿನ ಇವರ ಸಾಧನೆಗೆ ಮುಂಚಿತವಾಗಿ ಅತ್ಯುತ್ತಮ ಗ್ರಾಮೀಣ ವರದಿಗಾಗಿ ನೀಡಲಾಗುವ 2013ರ ‘ಪದ್ಯಾಣ ಗೋಪಾಲಕೃಷ್ಣ (ಪ.ಗೋ) ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ’ ಹಾಗೂ ಸೌಹಾರ್ದತೆಯ ಕುರಿತ ವಿಶೇಷ ವರದಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ನೀಡುವ 2013 ರ ‘ಬ್ರ್ಯಾಂಡ್ ಮಂಗಳೂರು’ ಪ್ರಶಸ್ತಿ ಲಭಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










