
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಜನರ ಆರ್ಥಿಕ ಹಾಗೂ ಸಾಮಾಜಿಕ ಏಳಿಗೆಗಾಗಿ ಬದುಕನ್ನೇ ಮುಡಿಪಾಗಿಟ್ಟ ಸಹಕಾರ ರಂಗದ ಪಿತಾಮಹ ಮೊಳಹಳ್ಳಿ ಶಿವರಾವ್ ಅವರ ಜೀವನ ಸಾಧನೆಯನ್ನಾಧರಿಸಿದ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿರುವ ಎಸ್ಸಿಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು. ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಈ ವಿಶೇಷ ಪುಸ್ತಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್, ಎಸ್ಸಿಡಿಸಿಸಿ ಬ್ಯಾಂಕ್ನ ಕಿರಿಯ ನಿರೀಕ್ಷಕ ಹಾಗೂ ಹಿರಿಯ ಪತ್ರಿಕೋದ್ಯಮಿ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್ಪೇಟೆ ಅವರು ಬರೆದಿರುವ ಈ ಕೃತಿಯು ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ ಎಂದರು. ಕುಂದಾಪುರ ಮೂಲದವರಾದ ಮೊಳಹಳ್ಳಿಯವರು ಪುತ್ತೂರಿನಲ್ಲಿ ವಕೀಲ ವೃತ್ತಿಯಲ್ಲಿದ್ದರೂ ಎತ್ತಿನಗಾಡಿಯಲ್ಲಿ ಊರೂರು ಸಂಚರಿಸಿ ಸಹಕಾರಿ ರಂಗವನ್ನು ಕಟ್ಟಿಬೆಳೆಸಿದ ಅಪರೂಪದ ತ್ಯಾಗಮಯಿ ಎಂದು ಅವರ ಸೇವೆಯನ್ನು ಸ್ಮರಿಸಿದರು.
ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಸಿಇಒ ಗೋಪಿನಾಥ್ ಭಟ್, ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಿರ್ದೇಶಕ ಶಶಿಕುಮಾರ್ ರೈ ಬಾಳ್ಕೊಟ್ಟು, ನಬಾರ್ಡ್ ಅಧಿಕಾರಿಗಳಾದ ಸಂಗೀತಾ, ರಮೇಶ್ ಹಾಗೂ ಸುಧೀರ್ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಸುಮಾರು ೩೬ ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಲೇಖಕ ಜಗದೀಶ್ಚಂದ್ರ ಅಂಚನ್ ಅವರು 4,500 ಕ್ಕೂ ಹೆಚ್ಚು ಕ್ರೀಡಾ ಲೇಖನಗಳು, 200 ಕ್ಕೂ ಅಧಿಕ ಸಹಕಾರ ಕ್ಷೇತ್ರದ ಲೇಖನಗಳು ಹಾಗೂ ನಾಟಕ, ಸಿನಿಮಾ, ಯಕ್ಷಗಾನ ವಿಮರ್ಶೆಗಳನ್ನು ಬರೆದಿದ್ದಾರೆ. ಮೊಳಹಳ್ಳಿ ಶಿವರಾಯರ ಮೇಲಿನ ಗೌರವದಿಂದ ಕಳೆದ ಒಂದು ದಶಕದಿಂದ ಪ್ರತೀವರ್ಷ ಆಗಸ್ಟ್ ೪ ರಂದು ಅವರ ಜಯಂತಿಯಂದು ಸ್ಮರಣಾರ್ಥ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದ ಜಗದೀಶ್ಚಂದ್ರ ಅವರ ಈ ಅಧ್ಯಯನ ಮತ್ತು ಸಾಮಾಜಿಕ ಕಾಳಜಿಯೇ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯ ರಚನೆಗೆ ಮುಖ್ಯ ಪ್ರೇರಣೆಯಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









