ಮಂಗಳೂರು : ಗೋಲ್ಡನ್ ಮೂವಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಕನ್ನಡ ಹಾಗೂ ತುಳು ಭಾಷೆಯ ವಿಭಿನ್ನ ಚಿತ್ರ ‘ಪಿಚ್ಚರ್’ ಆಗಸ್ಟ್ 7 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆ ಕಾಣಲಿದೆ. ಕರಾವಳಿ ಭಾಗದಲ್ಲಿ ತುಳು ಭಾಷೆಯಲ್ಲಿ ಹಾಗೂ ರಾಜ್ಯದ ಇತರ ಜಿಲ್ಲೆಗಳಲ್ಲಿ ಕನ್ನಡ ಆವೃತ್ತಿಯಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಟ ಹಾಗೂ ನಿರ್ಮಾಪಕ ಗೋಲ್ಡನ್ ಸ್ಟಾರ್ ಗಣೇಶ್ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕರಾವಳಿ ಹಾಗೂ ಜಮ್ಮು-ಕಾಶ್ಮೀರದ ಸೌಂದರ್ಯವನ್ನು ಸೆರೆಹಿಡಿದಿರುವ ಈ ಚಿತ್ರದಲ್ಲಿ ಈ ಭಾಗದ ಅನುಭವಿ ಮತ್ತು ಹೊಸ ಕಲಾವಿದರು ಅಭಿನಯಿಸಿದ್ದಾರೆ. ಈಗಾಗಲೇ ಉಡುಪಿ ಮತ್ತು ಪುತ್ತೂರಿನಲ್ಲಿ ನಡೆದ ಪ್ರೀಮಿಯರ್ ಶೋಗಳಲ್ಲಿ ಉತ್ತಮ ಮೆಚ್ಚುಗೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಕಾಸರಗೋಡು, ಗಲ್ಫ್ ರಾಷ್ಟ್ರಗಳು ಹಾಗೂ ಒಟಿಟಿಯಲ್ಲೂ ಚಿತ್ರ ತೆರೆಕಾಣಲಿದೆ.
ತುಳುವಿನ ಹಾಸ್ಯ ಮತ್ತು ಕನ್ನಡದ ಭಾವನಾತ್ಮಕತೆಯ ಸಮ್ಮಿಶ್ರಣವಾಗಿ ಮೂಡಿಬಂದಿರುವ ಈ ಸಿನಿಮಾಗೆ ಕರಾವಳಿ ಪ್ರೇಕ್ಷಕರಿಂದ ಉತ್ತಮ ಪ್ರೋತ್ಸಾಹ ಸಿಗುವ ಭರವಸೆಯನ್ನು ಗಣೇಶ್ ವ್ಯಕ್ತಪಡಿಸಿದರು. ಒಳ್ಳೆಯ ಕಥೆ ದೊರೆತರೆ ತುಳು ಸಿನಿಮಾದಲ್ಲಿ ಅಭಿನಯಿಸಲು ಸಿದ್ಧವಿರುವುದಾಗಿ ತಿಳಿಸಿದ ಅವರು, ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸಿನಿಮಾರಂಗಕ್ಕೆ ಮಾರಕವಲ್ಲ, ಅದನ್ನು ನಾವು ಬಳಸಿಕೊಳ್ಳುವ ರೀತಿಯಲ್ಲಿ ಒಳಿತು-ಕೆಡುಕು ನಿರ್ಧಾರವಾಗುತ್ತದೆ ಎಂದರು. ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಆರಂಭಗೊಂಡ ಈ ಸಿನಿಮಾ ಪ್ರೇಕ್ಷಕರ ಬೆಂಬಲದಿಂದ ಇಂದು ಬೃಹತ್ ಬಜೆಟ್ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರದ ಹಾಡುಗಳು ಜನಪ್ರಿಯಗೊಂಡಿದ್ದು, ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗೆದ್ದರೆ ಮತ್ತಷ್ಟು ಚಿತ್ರಗಳನ್ನು ನಿರ್ಮಿಸುವ ಹುಮ್ಮಸ್ಸು ಬರಲಿದೆ ಎಂದರು.
ಹಿರಿಯ ನಟ ದೇವದಾಸ್ ಕಾಪಿಕಾಡ್ ಮಾತನಾಡಿ, ಕನ್ನಡದ ಜನಪ್ರಿಯ ನಟ ಗಣೇಶ್ ದಂಪತಿ ತುಳು ರಂಗದ ಸರ್ವ ಕಲಾವಿದರನ್ನು ಒಟ್ಟುಗೂಡಿಸಿ ಸಿನಿಮಾ ನಿರ್ಮಿಸಿರುವುದು ಹೆಮ್ಮೆಯ ವಿಚಾರ ಎಂದರು. ಚಿತ್ರದ ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್ ಹಾಗೂ ನಾಯಕಿ ಅಮೃತಾ ಸಿನಿಮಾದಲ್ಲಿ ತಮ್ಮ ಪಾತ್ರಗಳು ಅತ್ಯುತ್ತಮವಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಪ್ರೋತ್ಸಾಹವೇ ಚಿತ್ರತಂಡಕ್ಕೆ ಶ್ರೀರಕ್ಷೆ ಎಂದು ಆಶಿಸಿದರು. ಗೋಷ್ಠಿಯಲ್ಲಿ ನಟ ಭೋಜರಾಜ್ ವಾಮಂಜೂರು, ನಟ ಅರ್ಜುನ್ ದೇವ್, ಸಂಗೀತ ನಿರ್ದೇಶಕ ಸಾಮ್ಯುವೆಲ್, ವಿತರಕರಾದ ಸಚಿನ್ ಎ.ಎಸ್. ಉಪ್ಪಿನಂಗಡಿ ಹಾಗೂ ಮುನೀಂದ್ರ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









