ಉಳ್ಳಾಲ : ಬಡಜನರ ಸೇವೆ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಿಜೆಪಿ ನಾಯಕ ಸಂತೋಷ್ ಕುಮಾರ್ ಬೋಳಿಯಾರ್ ಹಾಗೂ ಅವರ ಕುಟುಂಬದ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ನಿರ್ಮಿಸಿಕೊಡಲಾದ 7ನೇ ನೂತನ ಮನೆಯ ಹಸ್ತಾಂತರ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನೆರವೇರಿತು . ಬೋವಿ ಸಮಾಜದ ಬಡ ಕುಟುಂಬಕ್ಕೆ ಈ ರೀತಿಯ ಸುಂದರ ಮನೆ ನಿರ್ಮಿಸಿಕೊಟ್ಟಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ರಾಷ್ಟ್ರೀಯತೆ ಹಾಗೂ ಹಿಂದುತ್ವದ ಆಶಯಗಳೊಂದಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಬೋವಿ ಸಮಾಜಕ್ಕೆ ಸಂತೋಷ್ ಅವರು ನೀಡಿರುವ ಈ ಕೊಡುಗೆ ಇಡೀ ಸಮಾಜಕ್ಕೆ ಅತಿಯಾದ ಸಂತಸ ತಂದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು .
ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಎದುರಾದ ಕಷ್ಟ-ಕಾರ್ಪಣ್ಯಗಳನ್ನು ಧೈರ್ಯವಾಗಿ ಎದುರಿಸಿ ಸದಾ ಸಮಾಜದ ಕಲ್ಯಾಣಕ್ಕಾಗಿ ಶ್ರಮಿಸುವ ಸಂತೋಷ್ ಬೋಳಿಯಾರ್ ಅವರ ಈ ಸೇವಾನಿಷ್ಠೆ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಹಾಗೂ ಬಡವರ ಕಲ್ಯಾಣ ಯೋಜನೆಯ ಆಶಯದಂತೆ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಇವರು ನಿರಂತರವಾಗಿ ಮಾಡುತ್ತಿದ್ದಾರೆ. ಇಂದು 7ನೇ ಮನೆ ಹಸ್ತಾಂತರಗೊಂಡಿದ್ದು, ಮುಂದಿನ ದಿನಗಳಲ್ಲಿ ಇವರಿಂದ 100 ಮನೆಗಳನ್ನು ಬಡವರಿಗೆ ನಿರ್ಮಿಸಿಕೊಡುವ ಸೌಭಾಗ್ಯ ಹಾಗೂ ಉತ್ತಮ ಆರೋಗ್ಯವನ್ನು ಸೋಮೇಶ್ವರ ದೇವಸ್ಥಾನದ ಶ್ರೀ ಸೋಮನಾಥ ದೇವರು ಅನುಗ್ರಹಿಸಲಿ ಎಂದು ಸತೀಶ್ ಕುಂಪಲ ಶುಭಹಾರೈಸಿದರು.
ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಧುರೀಣರು, ಜನಪ್ರತಿನಿಧಿಗಳು, ಹಿರಿಯ ನಾಯಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿ ನೂತನ ಮನೆ ಪಡೆದ ಕುಟುಂಬಕ್ಕೆ ಹಾಗೂ ಸೇವಾ ಕಾರ್ಯ ನಡೆಸಿದ ಸಂತೋಷ್ ಬೋಳಿಯಾರ್ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಹಾಗೂ ಇಡೀ ಪಕ್ಷದ ಕಾರ್ಯಕರ್ತರು ಇಂತಹ ಪ್ರತಿಯೊಂದು ಸತ್ಕಾರ್ಯಗಳಿಗೂ ಸದಾ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಅವರು ಪುನರುಚ್ಚರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









