ಪುತ್ತೂರು : ಬೆಟ್ಟಂಪಾಡಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಕೇರಳ ಮೂಲದ ಅಂತಾರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಬದಿಯಡ್ಕ ನಿವಾಸಿ ಸತೀಶ್ (31) ಬಂಧಿತ ಆರೋಪಿಯಾಗಿದ್ದಾನೆ.
ದೇವಸ್ಥಾನದ ಆಡಳಿತ ಮಂಡಳಿಯ ವಿನೋದ್ ಕುಮಾರ್ ಬಿ ಅವರು ಆಗಸ್ಟ್ 25ರಂದು ದೇವಾಲಯಕ್ಕೆ ತೆರಳಿದಾಗ ಹೊರಭಾಗದಲ್ಲಿದ್ದ ಕಾಣಿಕೆ ಹುಂಡಿ ನಾಪತ್ತೆಯಾಗಿರುವುದು ಕಂಡುಬಂದಿತ್ತು. ತಕ್ಷಣ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆಗಸ್ಟ್ 24ರ ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಹುಂಡಿಯನ್ನು ಎತ್ತಿಕೊಂಡು ಪರಾರಿಯಾಗಿರುವುದು ಖಚಿತವಾಗಿತ್ತು. ಸುಮಾರು 2,500 ರೂ. ಮೌಲ್ಯದ ಹುಂಡಿಯಲ್ಲಿದ್ದ 4,500 ರೂ. ನಗದನ್ನು ದೋಚಲಾಗಿತ್ತು.
ಈ ಕುರಿತು ಸಲ್ಲಿಸಿದ ದೂರಿನನ್ವಯ ಭಾರತೀಯ ನ್ಯಾಯ ಸಂಹಿತೆಯಡಿ (ಬಿಎನ್ಎಸ್ ಸೆಕ್ಷನ್ 305(ಇ)) ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕೇರಳದ ಕಿನ್ನಿಗಾರು, ಬದಿಯಡ್ಕ ಹಾಗೂ ಆದೂರು ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು, ಬದಿಯಡ್ಕದಲ್ಲಿ ಆರೋಪಿ ಸತೀಶ್ನನ್ನು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತನಿಂದ ಕಳವು ಮಾಡಲಾಗಿದ್ದ ಕಾಣಿಕೆ ಹುಂಡಿ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 1 ಲಕ್ಷ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿ ಸತೀಶ್ ವಿರುದ್ಧ ಈಗಾಗಲೇ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳ್ಳತನದ ಪ್ರಕರಣವೂ ದಾಖಲಾಗಿದೆ.
ಡಿವೈಎಸ್ಪಿ ಪ್ರಮೋದ್ ಕುಮಾರ್ ಹಾಗೂ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯಕ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ಗುಣ ಪಿ ಮತ್ತು ಸುಷ್ಮಾ ಜಿ ಭಂಡಾರಿ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಸಿಬ್ಬಂದಿಗಳಾದ ರಮೇಶ್, ನಾಗರಾಜ್, ಮಂಜುನಾಥ್, ಆಕಾಶ್, ಕಾರ್ತಿಕ್, ಶರಣಪ್ಪ ಪಾಟೀಲ್, ಈರಣ್ಣ, ಹರಿಪ್ರಸಾದ್ ಹಾಗೂ ಸಿಡಿಆರ್ ವಿಭಾಗದ ಸಂಪತ್ ಮತ್ತು ದಿವಾಕರ್ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









