ಮಂಗಳೂರು : ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಬಲಪಡಿಸಲು ರಾಜ್ಯ ಸರ್ಕಾರ ಬೃಹತ್ ಯೋಜನೆ ರೂಪಿಸಿದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಮಂಗಳೂರಿನ ನೇತ್ರಾವತಿ ನದಿ, ತಣ್ಣೀರುಬಾವಿ ಬ್ಲೂ ಫ್ಲ್ಯಾಗ್ ಬೀಚ್ ಹಾಗೂ ನ್ಯೂ ಮಂಗಳೂರು ಬಂದರು ಪ್ರದೇಶಗಳಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನೆ ನಡೆಸಿದರು. ಕರಾವಳಿಯ ಪ್ರಕೃತಿ ಸೌಂದರ್ಯ, ನದಿ, ಬೀಚ್ ಮತ್ತು ಬಂದರು ಸಂಪನ್ಮೂಲಗಳನ್ನು ಬಳಸಿಕೊಂಡು ಈ ಪ್ರದೇಶವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿ ಬೆಳೆಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ನೇತ್ರಾವತಿ ನದಿಯಲ್ಲಿ ರಿವರ್ ಕ್ರೂಸ್ ಮತ್ತು ಹೌಸ್ಬೋಟ್ ಸೇವೆಗಳನ್ನು ಆರಂಭಿಸುವ ಮೂಲಕ ನದಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಸಮುದಾಯಗಳನ್ನು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿ, ಅವರಿಗೆ ಉದ್ಯೋಗ ಹಾಗೂ ಆದಾಯ ಮೂಲಗಳನ್ನು ಸೃಷ್ಟಿಸಲಾಗುವುದು. ನ್ಯೂ ಮಂಗಳೂರು ಬಂದರಿಗೆ ಆಗಮಿಸುವ ದೇಶೀಯ ಮತ್ತು ವಿದೇಶಿ ಕ್ರೂಸ್ ಹಡಗುಗಳ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮಂಗಳೂರು-ಕಾರವಾರ-ಗೋವಾ ವಲಯದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಪ್ರವಾಸಿ ಜಾಲವನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ.
ತಣ್ಣೀರುಬಾವಿಯ ಬ್ಲೂ ಫ್ಲ್ಯಾಗ್ ಬೀಚ್ ಸೇರಿದಂತೆ ಕರಾವಳಿಯ ಪ್ರಮುಖ ಬೀಚ್ಗಳಲ್ಲಿ ಗುಣಮಟ್ಟದ ಆಸನ, ಆಹಾರ ಮಳಿಗೆಗಳು ಮತ್ತು ನೈರ್ಮಲ್ಯ ವ್ಯವಸ್ಥೆಗಳನ್ನು ರೂಪಿಸಲಾಗುವುದು. ಪ್ರಸ್ತುತ ಇರುವ ತಾತ್ಕಾಲಿಕ ವ್ಯವಸ್ಥೆಗಳ ಬದಲು ಏಕರೂಪದ ಮೂಲಸೌಕರ್ಯ ಕಲ್ಪಿಸಲಾಗುತ್ತಿದ್ದು, ಮೊದಲ ಹಂತದ ಕಾಮಗಾರಿಗಳು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಅಭಿವೃದ್ಧಿ ಕಾಮಗಾರಿಗಳಿಗೆ ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳು ಸವಾಲಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಪ್ರವಾಸೋದ್ಯಮದ ನಡುವೆ ಸಮತೋಲನ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಮನ್ವಯ ಸಾಧಿಸಲಾಗುತ್ತಿದೆ.
ವಾಟರ್ ಸ್ಪೋರ್ಟ್ಸ್ ಹಾಗೂ ಸಾಹಸ ಪ್ರವಾಸೋದ್ಯಮಕ್ಕೆ ಚಾಲನೆ ನೀಡುವ ಮುನ್ನ ರಸ್ತೆ ಸಂಪರ್ಕ, ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಬಲಪಡಿಸಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಇದೇ ವೇಳೆ ಹೋಂಸ್ಟೇಗಳ ಹೆಸರಿನಲ್ಲಿ ಅಕ್ರಮವಾಗಿ ವಾಣಿಜ್ಯ ಲಾಡ್ಜ್ಗಳನ್ನು ನಡೆಸುವುದಕ್ಕೆ ಕಟ್ಟುನಿಟ್ಟಿನ ತಡೆ ಒಡ್ಡಲಾಗುವುದು. ಕರಾವಳಿಯಲ್ಲಿ ಯಾವುದೇ ಕಾರಣಕ್ಕೂ ಕ್ಯಾಸಿನೋ ಸಂಸ್ಕೃತಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ಪರಿಸರ ಸ್ನೇಹಿ ಹಾಗೂ ಸ್ಥಳೀಯರ ಸಬಲೀಕರಣಕ್ಕೆ ಪೂರಕವಾದ ಸುಸ್ಥಿರ ಪ್ರವಾಸೋದ್ಯಮಕ್ಕೆ ಮಾತ್ರ ಉತ್ತೇಜನ ನೀಡಲಾಗುವುದು ಎಂದಿದ್ದಾರೆ. ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿಯಡಿ ಸ್ಥಳೀಯರಿಗೆ ಹೆಚ್ಚಿನ ಆದಾಯ ಮತ್ತು ಸಣ್ಣ ಉದ್ಯಮಾವಕಾಶಗಳನ್ನು ಕಲ್ಪಿಸುವುದೇ ಇಲಾಖೆಯ ಮುಖ್ಯ ಗುರಿಯಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









