ಉಡುಪಿ : ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ ಮಂಡಳಿಗಳ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಒಟ್ಟು 1,205.99 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಬಿಲ್ಗಳು ದೀರ್ಘಕಾಲದಿಂದ ಪಾವತಿಯಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಜಿಲ್ಲೆಯಾದ್ಯಂತ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದು, ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ ಎಂದು ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಸಂಘದ ಪದಾಧಿಕಾರಿಗಳು ಹೆಬ್ರಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಬಾಕಿ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮುನ್ನ ಬ್ರಹ್ಮಾವರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಉಪ್ಪುಂದ ಗೋಪಾಲದಾಸ್ ಶೆಟ್ಟಿ ಮಾಹಿತಿ ನೀಡಿ, ಸಣ್ಣ ನೀರಾವರಿ ಇಲಾಖೆಯಲ್ಲಿ ಗರಿಷ್ಠ 618.85 ಕೋಟಿ ರೂ. ಹಾಗೂ ವರಾಹಿ ಯೋಜನೆಯಲ್ಲಿ 322.42 ಕೋಟಿ ರೂ. ಬಿಲ್ ಪಾವತಿಯಾಗಬೇಕಿದೆ. ಉಳಿದಂತೆ ಲೋಕೋಪಯೋಗಿ ಇಲಾಖೆಯಲ್ಲಿ 189.86 ಕೋಟಿ ರೂ., ಬಂದರು ಮತ್ತು ಮೀನುಗಾರಿಕೆ ಇಲಾಖೆಯಲ್ಲಿ 43.01 ಕೋಟಿ ರೂ., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 21.88 ಕೋಟಿ ರೂ. ಹಾಗೂ ಆರ್ಡಿಪಿಆರ್ನಲ್ಲಿ 4.92 ಕೋಟಿ ರೂ. ಸೇರಿದಂತೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಗಳಲ್ಲೂ ಪಾವತಿಗಳು ಬಾಕಿಯಿವೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಭಾಗಶಃ ಬಿಲ್ಗಳು ಬಿಡುಗಡೆಯಾಗುತ್ತಿದ್ದರೂ, ಉಡುಪಿಯ ಗುತ್ತಿಗೆದಾರರನ್ನು ಮಾತ್ರ ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿರುವುದು ಸರಿಯಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಹಾಲಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತನಾಡಿ, ಗುತ್ತಿಗೆದಾರರು ಬ್ಯಾಂಕ್ ಸಾಲ, ಓವರ್ಡ್ರಾಫ್ಟ್ ಹಾಗೂ ಖಾಸಗಿ ಸಾಲಗಳನ್ನು ಮಾಡಿ ಬಂಡವಾಳ ಹೂಡಿದ್ದಾರೆ. ಕಾರ್ಮಿಕರ ವೇತನ, ಸಿಮೆಂಟ್, ಸ್ಟೀಲ್, ಡೀಸೆಲ್, ಯಂತ್ರೋಪಕರಣಗಳ ಬಾಡಿಗೆ ಹಾಗೂ ಜಿಎಸ್ಟಿ, ರಾಯಲ್ಟಿಯಂತಹ ಶಾಸನಬದ್ಧ ತೆರಿಗೆಗಳನ್ನು ಈಗಾಗಲೇ ಪಾವತಿಸಿದ್ದಾರೆ. ಬಿಲ್ ವಿಳಂಬದಿಂದಾಗಿ ಬ್ಯಾಂಕ್ ಇಎಂಐ, ಬಡ್ಡಿ ಪಾವತಿಸಲು ಸಾಧ್ಯವಾಗದೆ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಹಣ ಬಿಡುಗಡೆಯಾದರೆ ಗುತ್ತಿಗೆದಾರರು, ಕಾರ್ಮಿಕರು, ವಸ್ತು ಪೂರೈಕೆದಾರರಿಗೆ ಅನುಕೂಲವಾಗಿ ಜಿಲ್ಲೆಯ ಶ್ರಮಿಕ ವರ್ಗಕ್ಕೆ ಜೀವಕಳೆ ಬರಲಿದೆ ಎಂದು ತಿಳಿಸಿದರು. ಈ ಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಬಿ. ಪೂಜಾರಿ, ಉಪಾಧ್ಯಕ್ಷರುಗಳು, ಖಜಾಂಚಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









