ಮಂಗಳೂರು : ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗಕ್ಕೆ ಪ್ರಕಟಿಸಲಾದ ಯೋಜನೆಗಳು ಮತ್ತು ಅನುದಾನಗಳನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ನಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸು ಇಲಾಖೆಯು ಆಡಳಿತಾತ್ಮಕವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಮಾಹಿತಿ ನೀಡುವುದು ಸಾಮಾನ್ಯ ಪ್ರಕ್ರಿಯೆ. ಅದನ್ನು ನೆಪವಾಗಿಟ್ಟುಕೊಂಡು ಯೋಜನೆಗಳಿಗೆ ಹಣವಿಲ್ಲ ಎಂದು ಆರೋಪಿಸುತ್ತಿರುವ ಬಿಜೆಪಿಯವರು, ತಮ್ಮ ಆಡಳಿತಾವಧಿಯಲ್ಲಿ ಕರಾವಳಿಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲೆಸೆದರು. ಶಾಸಕ ವೇದವ್ಯಾಸ ಕಾಮತ್ ಅವರು ಸಂಪುಟ ಸಭೆಗೆ ಮುನ್ನವೇ ರಾಜಕೀಯ ದುರುದ್ದೇಶದಿಂದ ಚೊಂಬು ಹಿಡಿದು ಕುಳಿತಿದ್ದಾರೆ ಎಂದು ಖಾದರ್ ವ್ಯಂಗ್ಯವಾಡಿದರು.
ತುಳು ಭಾಷೆಗೆ ಅಧಿಕೃತ ಮಾನ್ಯತೆ ನೀಡುವ ಡಾ. ಎಂ. ಮೋಹನ್ ಆಳ್ವ ಸಮಿತಿ ವರದಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಿದ್ಧವಾಗಿತ್ತು. ಆಗ ಕರಾವಳಿಯವರೇ ಆದ ವಿ. ಸುನಿಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರೂ, ಅದಕ್ಕೆ ಸಹಿ ಹಾಕುವ ಧೈರ್ಯ ತೋರಿಸಿರಲಿಲ್ಲ. ಆದರೆ ನಮ್ಮ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆ ಧೈರ್ಯದ ನಿರ್ಧಾರ ತಳೆದಿದ್ದಾರೆ. ಕರಾವಳಿಯ ಜನರು ಶ್ರಮಜೀವಿಗಳಾಗಿದ್ದು, ತಮಗೆ ಉಪಕಾರ ಮಾಡಿದವರನ್ನು ಎಂದಿಗೂ ಮರೆಯುವುದಿಲ್ಲ. ಯೋಜನೆಗಳ ಘೋಷಣೆಯಾಗಿ ಕನಿಷ್ಠ ಆರು ತಿಂಗಳಿಂದ ಒಂದು ವರ್ಷ ಜಾರಿಯಾಗದಿದ್ದರೆ ಬಿಜೆಪಿ ವಿರೋಧಿಸುವುದರಲ್ಲಿ ಅರ್ಥವಿತ್ತು. ಸಂಪುಟ ನಿರ್ಧಾರಗಳನ್ನೇ ಟೀಕಿಸುವ ಇಂತಹ ರಾಜಕೀಯವನ್ನು ಜನತೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವ ಮೂಲಕ ತಿರಸ್ಕರಿಸಲಿದ್ದಾರೆ ಎಂದರು.
ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಹೆಚ್ಚುತ್ತಿರುವ ರೋಗಿಗಳ ಒತ್ತಡವನ್ನು ನಿರ್ವಹಿಸಲು ಸರ್ಕಾರ ಮೊದಲ ಹಂತದಲ್ಲಿ 200 ಹೆಚ್ಚುವರಿ ಹಾಸಿಗೆಗಳನ್ನು ಮಂಜೂರು ಮಾಡಿದೆ ಎಂದು ಖಾದರ್ ತಿಳಿಸಿದರು. ನೆರೆಯ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ ಹಾಗೂ ಕಾಸರಗೋಡಿನಲ್ಲಿ ವೈದ್ಯಕೀಯ ಕಾಲೇಜುಗಳಿದ್ದರೂ, ರೋಗಿಗಳನ್ನು ನೇರವಾಗಿ ವೆನ್ಲಾಕ್ಗೆ ಶಿಫಾರಸು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿಯ ರೋಗಿಗಳನ್ನು ಹೊರತುಪಡಿಸಿ ಉಳಿದವರಿಗೆ ಸ್ಥಳೀಯ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುವಂತೆ ‘ಎಸ್ಒಪಿ’ (SOP) ರೂಪಿಸಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಇದರ ಭಾಗವಾಗಿ ಬೈಂದೂರು, ಮೂಡಬಿದಿರೆಯಲ್ಲಿ ನೂತನ ತಾಲೂಕು ಆಸ್ಪತ್ರೆ ಹಾಗೂ ಭಟ್ಕಳ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್ ಸೇರಿದಂತೆ ಪ್ರಮುಖ ನಾಯಕರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









