ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಲಭಿಸುತ್ತಿದ್ದ ಬೆಳೆ ವಿಮೆ ಹಣವನ್ನು ಗಣನೀಯವಾಗಿ ಕಡಿತಗೊಳಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ, ರೈತರ ಕಷ್ಟಕಾಲಕ್ಕೆ ನೆರವಾಗಬೇಕಿದ್ದ ಬೆಳೆ ವಿಮೆ ಯೋಜನೆಯು ಇದೀಗ ಕೃಷಿಕರಲ್ಲಿ ತೀವ್ರ ನಿರಾಶೆ ಮೂಡಿಸಿದೆ. ರಾಜ್ಯ ಸರ್ಕಾರವು ವಿಮಾ ಸಂಸ್ಥೆಗೆ ನೀಡಬೇಕಾದ ತನ್ನ ಪಾಲಿನ ವಂತಿಗೆಯನ್ನು ಸರಿಯಾಗಿ ಪಾವತಿಸದಿರುವುದೇ ಈ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಕೇಂದ್ರ ಸರ್ಕಾರ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ಕಳೆದ 2013 ರಿಂದ 2023 ರವರೆಗಿನ ಅವಧಿಯಲ್ಲಿ ಜಿಲ್ಲೆಯ ಅಡಿಕೆ ಕೃಷಿಕರಿಗೆ ಬೆಳೆ ವಿಮೆ ಯೋಜನೆಯು ಸಾಕಷ್ಟು ಆಸರೆಯಾಗಿತ್ತು. 2013 ರಲ್ಲಿ ಪ್ರತಿ ಹೆಕ್ಟೇರ್ಗೆ ಸರಾಸರಿ 1.28 ಲಕ್ಷ ರೂಪಾಯಿಯಷ್ಟು ವಿಮೆ ಪರಿಹಾರ ಲಭಿಸುತ್ತಿದ್ದರೆ, ನಂತರದ ವರ್ಷಗಳಲ್ಲಿ ಇದು 60 ಸಾವಿರದಿಂದ 90 ಸಾವಿರ ರೂಪಾಯಿವರೆಗೆ ದೊರೆಯುತ್ತಿತ್ತು. 2022-23 ರಲ್ಲಿ ಸುಮಾರು 70 ಸಾವಿರ ರೂಪಾಯಿಯಷ್ಟಿದ್ದ ಪರಿಹಾರ ಮೊತ್ತವು, 2024-25 ನೇ ಸಾಲಿನಲ್ಲಿ 45 ರಿಂದ 50 ಸಾವಿರ ರೂಪಾಯಿಗೆ ಕುಸಿದು, ಪ್ರಸ್ತುತ ವರ್ಷದಲ್ಲಿ ಸರಾಸರಿ 20 ಸಾವಿರ ರೂಪಾಯಿಗೆ ಇಳಿಕೆಯಾಗಿದೆ ಎಂದು ಅಂಕಿಅಂಶಗಳೊಂದಿಗೆ ವಿವರಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪ್ರಮುಖ ನಾಯಕರಾದ ಪುಷ್ಪಾ ಮೇದಪ್ಪ, ಶೋಭೇಂದ್ರ, ಯತೀಶ್ ಆರ್ವರ್, ಉಮೇಶ್ ಬೆಳ್ತಂಗಡಿ, ಶಶಿಧರ ಕಲ್ಮಂಜ, ವಸಂತ ಪೂಜಾರಿ, ರಾಕೇಶ್ ರೈ ಸುಳ್ಯ ಹಾಗೂ ಜಗನ್ನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









