ಮಂಗಳೂರು : ಮಂಗಳೂರಿನ ಚಾರಿತ್ರಿಕ ಹಿನ್ನೆಲೆಯುಳ್ಳ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಈ ಬಾರಿಯ ವರ್ಷಂಪ್ರತಿ ನವರಾತ್ರಿ ಮಹೋತ್ಸವವು ಅಕ್ಟೋಬರ್ 11ರಿಂದ 22ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ನವರಾತ್ರಿ ಉತ್ಸವದ ಅಂಗವಾಗಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ದೇವಿಯ ವಿವಿಧ ಪೂಜಾದಿ ಕಾರ್ಯಕ್ರಮಗಳು ನೆರವೇರಲಿವೆ. ಅಕ್ಟೋಬರ್ 11ರಂದು ಬೆಳಿಗ್ಗೆ 9:00 ಗಂಟೆಗೆ ಗಣಪತಿ ಪ್ರಾರ್ಥನೆಯೊಂದಿಗೆ ಉತ್ಸವವು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದ್ದು, ಪ್ರತಿದಿನವೂ ದೇವಿಗೆ ವಿಶೇಷ ಅಲಂಕಾರ, ವಿವಿಧ ನೈವೇದ್ಯ, ಧಾರ್ಮಿಕ ಹೋಮ-ಹವನಗಳು ಹಾಗೂ ಮಹಾಪೂಜೆಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಲಿದೆ.
ಮಹೋತ್ಸವದ ಪ್ರಮುಖ ದಿನಗಳಲ್ಲಿ ಅಕ್ಟೋಬರ್ 15ರಂದು ಶ್ರೀ ಲಲಿತಾ ಪಂಚಮಿ, ಅಕ್ಟೋಬರ್ 16ರಂದು ಮೂಲಾನಕ್ಷತ್ರ ನಿಮಿತ್ತ ರಾತ್ರಿ ಬಲಿ ಉತ್ಸವಾರಂಭ, ಮತ್ತು ಅಕ್ಟೋಬರ್ 20ರಂದು ಮಹಾನವಮಿ ಅಂಗವಾಗಿ ಚಂಡಿಕಾ ಹೋಮ, ದೊಡ್ಡ ರಂಗಪೂಜೆ ಹಾಗೂ ಸಣ್ಣ ರಥೋತ್ಸವಗಳು ವೈಭವದಿಂದ ಜರುಗಲಿವೆ. ಅಕ್ಟೋಬರ್ 21ರ ವಿಜಯದಶಮಿಯಂದು ಬೆಳಿಗ್ಗೆ 9:30ಕ್ಕೆ ವಿದ್ಯಾರಂಭ ಹಾಗೂ ತುಲಾಭಾರ ಸೇವೆಗಳು ನಡೆದು, ಮಧ್ಯಾಹ್ನ 12:30ಕ್ಕೆ ರಥಾರೋಹಣ ಮತ್ತು ಸಂಜೆ 7:00 ಗಂಟೆಗೆ ವೈಭವದ ದೊಡ್ಡ ರಥೋತ್ಸವ ಸಂಪನ್ನಗೊಳ್ಳಲಿದೆ. ತರುವಾಯ ಅಕ್ಟೋಬರ್ 22ರಂದು ಅವಭೃತ ಮಂಗಳ ಸ್ನಾನ ಹಾಗೂ ಅಕ್ಟೋಬರ್ 23ರಂದು ಸಂಪ್ರೋಕ್ಷಣೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಜೆಯ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸೌರಭ ಹರಿಯಲಿದ್ದು, ರಾಜ್ಯದ ವಿವಿಧ ಭಾಗಗಳ ಪ್ರಖ್ಯಾತ ಕಲಾತಂಡಗಳಿಂದ ಭಜನೆ, ಸುಗಮ ಸಂಗೀತ, ನೃತ್ಯ ವೈವಿಧ್ಯ, ಭರತನಾಟ್ಯ, ಕಥಕ್ ಹಾಗೂ ‘ಕಚದೇವಯಾನಿ’ ಸೇರಿದಂತೆ ವಿವಿಧ ಪ್ರಸಂಗಗಳ ಯಕ್ಷಗಾನ ಬಯಲಾಟ ಹಾಗೂ ತಾಳಮದ್ದಳೆಗಳು ಪ್ರದರ್ಶನಗೊಳ್ಳಲಿವೆ. ಕ್ಷೇತ್ರದ ಧರ್ಮಕರ್ತರು, ಪ್ರಧಾನ ಅರ್ಚಕರು ಹಾಗೂ ಸಿಬ್ಬಂದಿ ವರ್ಗದವರು ಭಕ್ತಾದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ಆಹ್ವಾನ ನೀಡಿದ್ದಾರೆ.
ನವರಾತ್ರಿ ಉತ್ಸವದ ನೇರಪ್ರಸಾರ ಮೆಗಾ ಮೀಡಿಯಾ ನ್ಯೂಸ್ ನ ಯೌಟ್ಯೂಬ್ ಮತ್ತು ಫೇಸ್ ಬುಕ್ ಪೇಜ್ ಗಳಲ್ಲಿ ಪ್ರತಿದಿನ ನಡೆಯಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









