ಸುಳ್ಯ : ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ಹರ್ಲಡ್ಕ ಎಂಬಲ್ಲಿ ಸುಮಾರು ಒಂದು ವರ್ಷ ವಯಸ್ಸಿನ ಮರಿ ಆನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಭಾಗಮಂಡಲದ ಮೀಸಲು ಅರಣ್ಯ ಪ್ರದೇಶದಿಂದ ದಾಳಿ ಇಟ್ಟಿದ್ದ ಕಾಡಾನೆಗಳ ಹಿಂಡು, ಚಂದ್ರಶೇಖರ ಎಂಬವರ ಕೃಷಿ ಭೂಮಿಗೆ ನುಗ್ಗಿ ಅಲ್ಲಿದ್ದ ಬಾಳೆ ಹಾಗೂ ಕಾಫಿ ಬೆಳೆಯನ್ನು ನಾಶಪಡಿಸಿವೆ.
ತೋಟದಿಂದ ಹಿಂಡು ಮರಳಿ ಕಾಡಿನತ್ತ ಸಾಗುವ ಹಾದಿ ಕಡಿದಾಗಿದ್ದರಿಂದ, ಬೆಟ್ಟದ ದಾರಿಯಲ್ಲಿ ಚಲಿಸುವಾಗ ಮರಿ ಆನೆ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದೆ ಎನ್ನಲಾಗಿದೆ. ಈ ವೇಳೆ ಆತಂಕಗೊಂಡ ಹಿಂಡಿನಲ್ಲಿದ್ದ ಇತರ ದೊಡ್ಡ ಆನೆಗಳು ಆಕಸ್ಮಿಕವಾಗಿ ಮರಿಯನ್ನು ತುಳಿದ ಪರಿಣಾಮ ಅದು ಸ್ಥಳದಲ್ಲೇ ಅಸುನೀರಿರಬಹುದು ಎಂದು ಊಹಿಸಲಾಗಿದೆ.
ಸ್ಥಳೀಯ ನಿವಾಸಿಗಳಲ್ಲಿ ಈ ಘಟನೆ ಭಾರೀ ಆತಂಕವನ್ನುಂಟು ಮಾಡಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡುವ ನಿರೀಕ್ಷೆಯಿದೆ. ಮರಿ ಆನೆಯ ಸಾವಿಗೆ ನಿಖರವಾದ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









