ಮಂಗಳೂರು : ಮಂಗಳೂರು ನಗರದ ಅಭಿವೃದ್ಧಿ ವಿಚಾರದಲ್ಲಿ ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮರೆಮಾಚಲು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ರಾಜಕೀಯ ಪ್ರಹಸನಗಳಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಸಿ ವಿನಯರಾಜ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ನಗರಾಡಳಿತ ಹಾಗೂ ರಾಜ್ಯ ಸರ್ಕಾರ ತಮ್ಮ ಕೈಯಲ್ಲೇ ಇದ್ದರೂ ನಗರದ ಮೂಲಸೌಕರ್ಯ, ವಿಶೇಷವಾಗಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳದ ಶಾಸಕರು, ಈಗ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಮಂಗಳೂರಿನ ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಿದ್ದು, ಇಂತಹ ತಂತ್ರಗಳಿಗೆ ಮರುಳಾಗುವುದಿಲ್ಲ. ಕಳೆದ ಎಂಟು ವರ್ಷಗಳಿಂದ ಶಾಸಕರಾಗಿ ಪ್ರತಿನಿಧಿಸುತ್ತಿರುವ ಅವರು, ತಮ್ಮ ಅವಧಿಯಲ್ಲಿ ಕ್ಷೇತ್ರಕ್ಕೆ ತಂದ ಅನುದಾನ ಮತ್ತು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಸವಾಲು ಎಸೆದಿದ್ದಾರೆ.
ಕದ್ರಿ ಶಿವಭಾಗ್ ವಾರ್ಡ್ನಲ್ಲಿ ಬಿಜೆಪಿ ಪ್ರತಿನಿಧಿಯೇ ಕಾರ್ಪೊರೇಟರ್ ಆಗಿದ್ದ ಅವಧಿಯಲ್ಲಿ ಧ್ವನಿ ಎತ್ತದ ಶಾಸಕರು, ಈಗ ನಾಟಕೀಯವಾಗಿ ವರ್ತಿಸುತ್ತಿರುವುದು ಅವರ ಇಮ್ಮುಖ ನೀತಿಯನ್ನು ತೋರಿಸುತ್ತದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಮಹಾನಗರ ಪಾಲಿಕೆಗೆ 145 ಕೋಟಿ ರೂಪಾಯಿಗಳಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದ್ದಾರೆ. ಪ್ರತಿಯೊಬ್ಬ ಶಾಸಕರಿಗೆ ಲಭಿಸುವ 25 ಕೋಟಿ ರೂಪಾಯಿ ಅನುದಾನ, ನೈಸರ್ಗಿಕ ವಿಕೋಪ ಪರಿಹಾರ ನಿಧಿಯಡಿ ಲಭಿಸಿದ 15 ಕೋಟಿ ರೂಪಾಯಿ, 15ನೇ ಹಣಕಾಸು ಆಯೋಗದ 10 ಕೋಟಿ ರೂಪಾಯಿ ಹಾಗೂ ರಾಜ್ಯ ಹಣಕಾಸು ಆಯೋಗ ನೀಡಿದ 5 ಕೋಟಿ ರೂಪಾಯಿ ಸೇರಿದಂತೆ ಕೋಟ್ಯಂತರ ರೂಪಾಯಿ ನಿಧಿ ಲಭ್ಯವಿದೆ. ಇಷ್ಟೇ ಅಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ನಗರಕ್ಕೆ 400 ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಿದ್ದು, ಬಹುತೇಕ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿಸಿ ಪ್ರಗತಿಯಲ್ಲಿವೆ.
ಒಟ್ಟಾರೆಯಾಗಿ 645 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ದೊರೆತು ಕಾಮಗಾರಿಗಳು ಭರದಿಂದ ಸಾಗುತ್ತಿರುವಾಗ, ರಾಜ್ಯ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸುವುದು ಆಧಾರರಹಿತವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ವ್ಯಕ್ತವಾಗುತ್ತಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಸೋಲಿನ ಭಯ ಆವರಿಸಿ ಶಾಸಕರು ಇಂತಹ ಹಾದಿಬೀದಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆ ವಹಿಸುವ ಶಾಸಕರಿಗೆ ವಾಸ್ತವ ಸ್ಥಿತಿ ತಿಳಿದಿದ್ದರೂ ಸುಳ್ಳು ಹರಡುತ್ತಿದ್ದಾರೆ. ಇದಲ್ಲದೆ, ಸಂಸ್ಕೃತಿ ಮತ್ತು ಐಕ್ಯತೆಯ ಸಂಕೇತವಾಗಿರುವ ಮಂಗಳೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ನಗರದ ನೈರ್ಮಲ್ಯ ಹಾಗೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯು ಪಾಲಿಕೆಯ ಸಾಮಾನ್ಯ ಕಾರ್ಯವಾಗಿದ್ದು, ಇದನ್ನು ತಮ್ಮ ವೈಯಕ್ತಿಕ ಸಾಧನೆ ಎಂದು ಬಿಂಬಿಸಿಕೊಳ್ಳುವುದನ್ನು ಶಾಸಕರು ತಕ್ಷಣವೇ ನಿಲ್ಲಿಸಬೇಕು.
ಪತ್ರಿಕಾಗೋಷ್ಠಿಯಲ್ಲಿ ಪ್ರಕಾಶ್ ಸಾಲಿಯಾನ್, ಸಲೀಮ್, ಅಪ್ಪಿ, ಸಂಶುದ್ದಿನ್, ಅನಿಲ್ ಪೂಜಾರಿ, ಸವಿತಾ ಮಿಸ್ಕಿತ್, ಅಶ್ರಫ್ ಬಜಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









