ಮಂಗಳೂರು : ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಅಪಾಯದಲ್ಲಿದ್ದ ಮೀನುಗಾರನೊಬ್ಬನನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಯಶಸ್ವಿಯಾಗಿ ರಕ್ಷಿಸಿದ್ದಾರೆ. ರವಿವಾರ ಮಧ್ಯರಾತ್ರಿ ಮಂಗಳೂರು ಕರಾವಳಿಯಿಂದ ಸುಮಾರು 54 ನಾಟಿಕಲ್ ಮೈಲಿ ದೂರದಲ್ಲಿ ‘ಐಎಫ್ಬಿ ಶಿವ ಸಾಗರ್’ ಎಂಬ ಬೋಟಿನಲ್ಲಿ ಬಲೆ ಎಳೆಯುತ್ತಿದ್ದಾಗ ಈ ಅನಾಹುತ ಸಂಭವಿಸಿತ್ತು. ಜೊತೆಯಲ್ಲಿದ್ದ ಸಿಬ್ಬಂದಿ ತಕ್ಷಣವೇ ಆತನನ್ನು ನೀರಿನಿಂದ ಮೇಲೆತ್ತಿದರೂ, ಆತನ ಆರೋಗ್ಯ ಪರಿಸ್ಥಿತಿ ಕ್ಷೀಣಿಸಿದ ಕಾರಣ ತಕ್ಷಣವೇ ವಿಹೆಚ್ಎಫ್ ಮೂಲಕ ತುರ್ತು ನೆರವಿಗಾಗಿ ಮನವಿ ಮಾಡಿದ್ದರು.
ಸಂದೇಶ ತಲುಪುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಕರಾವಳಿ ಕಾವಲು ಪಡೆಯ ಜಿಲ್ಲಾ ಪ್ರಧಾನ ಕಚೇರಿ-೩, ರಕ್ಷಣಾ ಕಾರ್ಯಾಚರಣೆಗಾಗಿ ‘ಐಸಿಜಿಎಸ್ ಸಿ-૪૪೮’ ಹಡಗನ್ನು ತುರ್ತಾಗಿ ಕಳುಹಿಸಿಕೊಟ್ಟಿತು. ಕತ್ತಲೆಯ ನಡುವೆಯೂ ಶ್ರಮಿಸಿದ ರಕ್ಷಣಾ ಪಡೆ ಬೋಟನ್ನು ತಲುಪಿ, ಸಂಕಷ್ಟದಲ್ಲಿದ್ದ ಮೀನುಗಾರನಿಗೆ ಪ್ರಾಥಮಿಕ ವೈದ್ಯಕೀಯ ಉಪಚಾರ ನೀಡಿ ಸುರಕ್ಷಿತವಾಗಿ ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಜೆಟ್ಟಿಗೆ ಕರೆತಂದಿದೆ. ಪ್ರಸ್ತುತ ಮೀನುಗಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









