ಮಂಗಳೂರು : ಎಂ.ಎನ್.ಆರ್. ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಹಿಂದೆ ಯಶಸ್ವಿ ‘ಗಲಾಟೆ’ ಚಲನಚಿತ್ರ ಹಾಗೂ ‘ಜೋಗುಳ’ ಧಾರಾವಾಹಿಯನ್ನು ತಂದಿದ್ದ ನಿರ್ಮಾಪಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಇದೀಗ ತಮ್ಮ ಬಹುನಿರೀಕ್ಷಿತ ಕನ್ನಡ ಸಿನಿಮಾ ‘ವಾದಿರಾಜ ವಾಲಗ ಮಂಡಳಿ’ (ವಿವಿಎಂ) ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಅತ್ಯುತ್ತಮ ಹಾಸ್ಯ ನಟರ ದಂಡೇ ಅಭಿನಯಿಸಿರುವ ಈ ಸಿನಿಮಾವನ್ನು ಡಿಸೆಂಬರ್ ಕೊನೆಯಲ್ಲಿ ಬೆಳ್ಳಿಪರದೆಗೆ ತರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಈ ಹಾಸ್ಯಮಯ ಕೌಟುಂಬಿಕ ಚಿತ್ರದ ಚಿತ್ರೀಕರಣವು ಬ್ರಹ್ಮಾವರ, ಮಂಗಳೂರು, ಮುಲ್ಕಿ ಹಾಗೂ ಕಾಸರಗೋಡಿನ ಸುಂದರ ಪರಿಸರದಲ್ಲಿ ಎರಡು ಹಂತಗಳಲ್ಲಿ ಒಟ್ಟು ೫೫ ದಿನಗಳ ಕಾಲ ನಡೆಸಲಾಗಿದೆ. ಸಂಪೂರ್ಣವಾಗಿ ಕರಾವಳಿ ಕನ್ನಡದ ವಿಶಿಷ್ಟ ಶೈಲಿ ಹಾಗೂ ಸೊಗಡಿನಲ್ಲಿ ಮೂಡಿಬಂದಿರುವ ಈ ಚಿತ್ರವು ಕುಟುಂಬ ಸಮೇತ ಕುಳಿತು ಆನಂದಿಸುವಂತಹ ಸಂಪೂರ್ಣ ಮನೋರಂಜನಾತ್ಮಕ ಕಥಾಹಂದರವನ್ನು ಹೊಂದಿದೆ.
ಚಿತ್ರದಲ್ಲಿ ನವೀನ್ ಡಿ. ಪಡೀಲ್, ಪ್ರಕಾಶ್ ತುಮಿನಾಡು, ದೀಪಕ್ ರೈ ಪಾಣಾಜೆ, ಪುಷ್ಪರಾಜ್ ಬೊಳ್ಳಾರು, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಶೋಭರಾಜ್ ಪಾವೂರು ಹಾಗೂ ಲಕ್ಷ್ಮಣ ಮಲ್ಲೂರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ವೇದಾಂತ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಹಾಗೂ ತನ್ನಿ ರಾವ್ ಮತ್ತು ವೇನ್ಯ ರೈ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ‘ವರಾಹ ರೂಪಂ’ ಹಾಡಿನ ಮೂಲಕ ಗಮನ ಸೆಳೆದಿದ್ದ ಶಶಿರಾಜ್ ಕಾವೂರು ಈ ಚಿತ್ರಕ್ಕೆ ಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ತಾಂತ್ರಿಕವಾಗಿ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದ್ದು, ಚೆನ್ನೈನ ಎಸ್. ಚಂದ್ರಶೇಖರನ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ, ಸ್ಟಂಟ್ ಶಿವು ಸಾಹಸ ಹಾಗೂ ವಿನಾಯಕ ಆಚಾರ್ಯ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಜಯಪ್ರಕಾಶ್ ತುಂಬೆ ಸಹ ನಿರ್ಮಾಣ ಮಾಡಿದ್ದು, ಸಂತೋಷ್ ಶೆಟ್ಟಿ ಮತ್ತು ಲಕ್ಷ್ಮಣ ಕುಮಾರ್ ಮಲ್ಲೂರು ಕಾರ್ಯಕಾರಿ ನಿರ್ಮಾಪಕರಾಗಿ, ರಾಜೇಶ್ ಕುಡ್ಲ ಪ್ರೊಡಕ್ಷನ್ ಮಾನೇಜರ್ ಆಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಪ್ರಸಿದ್ದ ಕಲಾವಿದ ದೇವಿ ಪೋಸ್ಟರ್ಗಳನ್ನು ಅದ್ಭುತವಾಗಿ ವಿನ್ಯಾಸಗೊಳಿಸಿದ್ದಾರೆ.
ಕರಾವಳಿಯ ಸೊಗಡಿನ ಕಥೆ ಹಾಗೂ ಹಾಸ್ಯದ ಗುಣಮಟ್ಟ ಉತ್ತಮವಾಗಿರುವುದರಿಂದ ನೆರೆರಾಜ್ಯದ ಪ್ರೇಕ್ಷಕರನ್ನೂ ತಲುಪುವ ವಿಶ್ವಾಸದೊಂದಿಗೆ ಮಲೆಯಾಳಂ ಮತ್ತು ತಮಿಳು ಭಾಷೆಗಳಿಗೂ ಚಿತ್ರವನ್ನು ಡಬ್ ಮಾಡಲಾಗುತ್ತಿದೆ. ಅದಲ್ಲದೆ, ಸಿನಿಮಾದಲ್ಲಿ ಒಟ್ಟು ಒಂಬತ್ತು ಹಾಡುಗಳಿದ್ದು (ಐದು ಪೂರ್ಣ ಹಾಡುಗಳು ಮತ್ತು ನಾಲ್ಕು ತುಣುಕು ಹಾಡುಗಳು), ಅಭಿ ವಿ, ಸಾಯಿವಿಷ್ಟೇಶ್, ಮೈಮ್ ರಾಮದಾಸ್, ಪ್ರಕಾಶ್ ಮಹಾದೇವನ್, ರವೀಂದ್ರ ಪ್ರಭು ಹಾಗೂ ಮಣಿಕಾಂತ್ ಕದ್ರಿ ಕಂಠದಾನ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಪ್ರಮುಖ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









