ಮಂಗಳೂರು : ಮಕ್ಕಳ ಮಾರಾಟವು ಅತ್ಯಂತ ಗಂಭೀರ ಸ್ವರೂಪದ ಅಪರಾಧವಾಗಿದ್ದು, ಕಾನೂನುಬಾಹಿರವಾಗಿ ಯಾವುದೇ ಮಗುವನ್ನು ದತ್ತು ನೀಡುವುದು ಅಥವಾ ಪಡೆಯುವುದು ಶಿಕ್ಷಾರ್ಹ ಕೃತ್ಯವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81ರ ಪ್ರಕಾರ, ಮಕ್ಕಳನ್ನು ಮಾರಾಟ ಮಾಡುವವರಿಗೆ ಮತ್ತು ಖರೀದಿಸುವವರಿಗೆ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಒಂದೊಮ್ಮೆ ಈ ಅಪರಾಧ ಕೃತ್ಯದಲ್ಲಿ ಮಕ್ಕಳಿಗೆ ಆಶ್ರಯ ನೀಡಿದ ಸಂಸ್ಥೆ ಅಥವಾ ವ್ಯಕ್ತಿಗಳು ಭಾಗಿಯಾಗಿರುವುದು ಕಂಡುಬಂದಲ್ಲಿ, ಶಿಕ್ಷೆಯ ಪ್ರಮಾಣವು ಕನಿಷ್ಠ 3 ವರ್ಷಗಳಿಂದ ಗರಿಷ್ಠ 7 ವರ್ಷಗಳವರೆಗೆ ವಿಸ್ತರಣೆಯಾಗಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಅನಾಥ, ಪರಿತ್ಯಕ್ತ ಅಥವಾ ಪೋಷಕರಿಂದ ಒಪ್ಪಿಸಲ್ಪಟ್ಟ ಮಕ್ಕಳ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ, ಅಥವಾ ಕಾನೂನುಬದ್ಧವಾಗಿ ಮಗುವನ್ನು ದತ್ತು ಪಡೆಯಲು ಇಚ್ಛಿಸುವ ಪೋಷಕರು ಸಂಬಂಧಪಟ್ಟ ಅಧಿಕೃತ ಸಂಸ್ಥೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ವಿಶೇಷ ದತ್ತು ಸಂಸ್ಥೆ, ಸರ್ಕಾರಿ ಬಾಲಕರ ಬಾಲಮಂದಿರ ಆವರಣ ಹಾಗೂ ಪಡೀಲ್ ಪ್ರಜಾಸೌಧದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ (ದೂರವಾಣಿ: 0824-2440004), ಮಕ್ಕಳ ಸಹಾಯವಾಣಿ (1098), ಮಂಗಳೂರಿನ ಸರ್ಕಾರಿ ವಿಶೇಷ ದತ್ತು ಸಂಸ್ಥೆ (0824-2484547) ಅಥವಾ ಪುತ್ತೂರಿನ ರಾಮಕೃಷ್ಣ ಸೇವಾ ಸಮಾಜ (08251-230016) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









