ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ ಹಿನ್ನೆಲೆಯಲ್ಲಿ ರಾತ್ರಿ ಹೊತ್ತಿನ ವಾಣಿಜ್ಯ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಕೊಂಚ ಸಡಿಲಿಕೆ ಮಾಡಲಾಗಿದೆ.
ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಎಲ್ಲಾ ವ್ಯಾಪಾರ ಮಳಿಗೆಗಳು, ಅಂಗಡಿಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಟೀ ಸ್ಟಾಲ್ಗಳು, ಪಾನ್ ಶಾಪ್ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಪ್ರತಿದಿನ ರಾತ್ರಿ 11.45ರ ತನಕ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ರಾತ್ರಿ 11.45ರಿಂದ ಮರುದಿನ ಬೆಳಗ್ಗೆ 5.30ರವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಆದರೆ, ಸಿಎಲ್-4, ಸಿಎಲ್-6(ಎ) ಹಾಗೂ ಸಿಎಲ್-7 ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ ಮತ್ತು ಅವು ತಮ್ಮ ಪರವಾನಗಿ ಷರತ್ತುಗಳ ಪ್ರಕಾರವೇ ಕಾರ್ಯನಿರ್ವಹಿಸಬೇಕಾಗುತ್ತದೆ.
ವೈದ್ಯಕೀಯ ಸೇವೆಗಳು, ಆಸ್ಪತ್ರೆಗಳು, ಔಷಧಾಲಯಗಳು, ತುರ್ತು ಸೇವೆಗಳು, ಅಗತ್ಯ ಸಾರ್ವಜನಿಕ ಸೌಲಭ್ಯಗಳು ಮತ್ತು ಸರ್ಕಾರ ಅಥವಾ ಸಂಬಂಧಪಟ್ಟ ಪ್ರಾಧಿಕಾರಗಳಿಂದ ವಿಶೇಷ ಅನುಮತಿ ಪಡೆದ ಘಟಕಗಳಿಗೆ ಈ ಆದೇಶದಿಂದ ವಿನಾಯಿತಿ ನೀಡಲಾಗಿದೆ.
ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಬಂದರು ಕೇಂದ್ರವಾಗಿರುವ ಮಂಗಳೂರು, ವಿವಿಧ ಸಮುದಾಯಗಳ ಜನರು ಒಟ್ಟಾಗಿ ಬದುಕುತ್ತಿರುವ ಸೂಕ್ಷ್ಮ ಪ್ರದೇಶವಾಗಿದೆ. ಈ ಹಿಂದೆ ನಡೆದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ರಾತ್ರಿ 10.30ರ ಒಳಗೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚುವಂತೆ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ನೆಲೆಸಿರುವುದರಿಂದ ಹೆಚ್ಚುವರಿಯಾಗಿ ಒಂದೂ ಕಾಲು ಗಂಟೆ ಸಮಯವನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಆದರೂ, ರಾತ್ರಿ ಸಮಯದಲ್ಲಿ ಜನರು ಕಾರಣವಿಲ್ಲದೆ ಗುಂಪು ಸೇರುವುದು, ಅನಗತ್ಯವಾಗಿ ಸಂಚರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವ ಮೂಲಕ ಶಾಂತಿಗೆ ಭಂಗ ತರುವ ಅಪಾಯವಿರುತ್ತದೆ. ತಡರಾತ್ರಿಯವರೆಗೂ ವ್ಯಾಪಾರ ನಡೆದರೆ ಜನದಟ್ಟಣೆ ಹೆಚ್ಚಾಗಿ ಅಹಿತಕರ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆ ಇರುವುದರಿಂದ, ರಾತ್ರಿ 11.45ರಿಂದ ಬೆಳಗ್ಗೆ 5.30ರವರೆಗೆ ನಿರ್ಬಂಧಕ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿಡಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









