ಬಂಟ್ವಾಳ: ಬಹುಭಾಷಾ ಸಾಮಾಜಿಕ ಜಾಗೃತಿ ಅಭಿಯಾನಗಳ ಮೂಲಕ ದೇಶಾದ್ಯಂತ ಮನೆಮಾತಾಗಿರುವ ಬಾಳ್ತಿಲದ ಪ್ರತಿಭಾನ್ವಿತ ವಿದ್ಯಾರ್ಥಿನಿ ಸನ್ನಿಧಿ ಎಲ್.ಎಸ್. ಕಶೆಕೋಡಿ ಅವರಿಗೆ ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಹಾಗೂ ಕನ್ನಡ ಗ್ರಾಮದ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಕರಾವಳಿ ಬಾಲ ಪ್ರತಿಭೆ ಪ್ರಶಸ್ತಿ’ ಒಲಿದು ಬಂದಿದೆ.
ನವದೆಹಲಿ ಸೇರಿದಂತೆ ದೇಶದ ಒಟ್ಟು ನಾಲ್ಕು ರಾಜ್ಯಗಳಲ್ಲಿ ಆರು ವಿವಿಧ ಭಾಷೆಗಳಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಮೂಲಕ ಸನ್ನಿಧಿ ಅವರು ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ್ದಾರೆ. ಕೇವಲ ಮತದಾನ ಜಾಗೃತಿಗೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಕುರಿತು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮುದಾಯವನ್ನು ಮಾದಕ ವಸ್ತುಗಳ (ಡ್ರಗ್ಸ್) ದುಷ್ಪರಿಣಾಮಗಳಿಂದ ದೂರವಿಡುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ವಿಶೇಷ ಜಾಗೃತಿ ಅಭಿಯಾನಗಳು ಇವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿವೆ.
ಕಾಸರಗೋಡಿನ ಮಧೂರು ರಸ್ತೆಯ ಮೀಪುಗುರಿ, ಪಾರೆಕಟ್ಟೆ-ಕನ್ನಡ ಗ್ರಾಮ ರಸ್ತೆಯಲ್ಲಿರುವ ‘ಕಾಸರಗೋಡು ಕನ್ನಡ ಗ್ರಾಮ’ದಲ್ಲಿ ನವೆಂಬರ್ 28 ಮತ್ತು 29ರಂದು ‘ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026’, ‘ಕೇರಳ-ಕರ್ನಾಟಕ ಉತ್ಸವ’ ಹಾಗೂ ‘ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ. ನವೆಂಬರ್ 29ರ ಭಾನುವಾರ ಅಪರಾಹ್ನ 3.00 ಗಂಟೆಗೆ ಜರುಗಲಿರುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ನಿಧಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು.
ಕಳೆದ 37 ವರ್ಷಗಳಿಂದ ಕೇರಳ ಗಡಿನಾಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಪೋಷಿಸುತ್ತಿರುವ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು, ಈ ಸಮ್ಮೇಳನದ ಅಂಗವಾಗಿ ನವೆಂಬರ್ 28ರಂದು ಬೆಳಿಗ್ಗೆ 10.00 ಗಂಟೆಗೆ ‘ಕೇರಳ-ಕರ್ನಾಟಕ ಭವನ’ದ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಶಿವರಾಮ ಕಾಸರಗೋಡು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









