ಉಪ್ಪಿನಂಗಡಿ: ಮಂಗಳೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪ್ರಯಾಣಿಸುವ ವಾಹನ ಸವಾರರ ಜೇಬಿಗೆ ಇಂದಿನಿಂದ ಮತ್ತಷ್ಟು ಕತ್ತರಿ ಬೀಳಲಿದೆ. ಬಿ.ಸಿ.ರೋಡ್-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ವ್ಯಾಪ್ತಿಯ ಬಜತ್ತೂರು ಗ್ರಾಮದ ವಳಾಲು-ನೀರಕಟ್ಟೆ ಸಮೀಪ ನೂತನವಾಗಿ ನಿರ್ಮಿಸಲಾದ ಟೋಲ್ ಪ್ಲಾಝಾದಲ್ಲಿ ನವೆಂಬರ್ 26ರಿಂದ ಅಧಿಕೃತವಾಗಿ ಸುಂಕ ವಸೂಲಾತಿಗೆ ಚಾಲನೆ ನೀಡಲಾಗಿದೆ.
ಈ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕೃತ ಆದೇಶ ಹೊರಡಿಸಿದ್ದು, ಉಪ್ಪಿನಂಗಡಿಯಿಂದ ಸುಮಾರು 8 ಕಿ.ಮೀ. ಅಂತರದಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದೆ. ಇದರ ಪರಿಣಾಮವಾಗಿ ಬಿ.ಸಿ.ರೋಡ್ ಮಾರ್ಗವಾಗಿ ಅಡ್ಡಹೊಳೆ, ಹಾಸನ ಹಾಗೂ ರಾಜಧಾನಿ ಬೆಂಗಳೂರಿನತ್ತ ಸಾಗುವ ವಾಹನಗಳು ಇನ್ನು ಮುಂದೆ ವಳಾಲು ಬಳಿಯೂ ಕಡ್ಡಾಯವಾಗಿ ಟೋಲ್ ಪಾವತಿಸಿ ಮುಂದೆ ಸಾಗಬೇಕಾಗಿದೆ.
ಒಟ್ಟು ಎಂಟು ಲೇನ್ಗಳನ್ನು ಹೊಂದಿರುವ ಈ ಟೋಲ್ ಪ್ಲಾಝಾದಲ್ಲಿ ಎರಡೂ ಬದಿಗಳಲ್ಲಿ ತಲಾ ನಾಲ್ಕು ಲೇನ್ಗಳನ್ನು ನಿರ್ಮಿಸಲಾಗಿದ್ದು, ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾಗಳ ಸುಗಮ ಸಂಚಾರಕ್ಕಾಗಿ ಎರಡೂ ಕಡೆ ಪ್ರತ್ಯೇಕ ಮಾರ್ಗ ಕಲ್ಪಿಸಲಾಗಿದೆ. ಎಂಟು ಲೇನ್ಗಳ ಪೈಕಿ ಆರು ಲೇನ್ಗಳನ್ನು (3+3) ಫಾಸ್ಟ್ಟ್ಯಾಗ್ ವಾಹನಗಳಿಗೆ ಮೀಸಲಿಡಲಾಗಿದ್ದರೆ, ಉಳಿದ ಎರಡು ಲೇನ್ಗಳಲ್ಲಿ ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬದಲಾಗಿ ಫೋನ್ಪೇ, ಗೂಗಲ್ ಪೇ ಅಥವಾ ಕ್ಯೂಆರ್ ಸ್ಕ್ಯಾನರ್ ಮೂಲಕ ಡಿಜಿಟಲ್ ಪಾವತಿ ಮಾಡಲು ಅವಕಾಶ ನೀಡಲಾಗಿದೆ ಎಂದು ನಿರ್ವಹಣಾ ಗುತ್ತಿಗೆ ಪಡೆದಿರುವ ಮಂಗಳೂರಿನ ಕೋರಲ್ ಸಂಸ್ಥೆಯ ಆಡಳಿತ ಪಾಲುದಾರ ಯಜ್ಞೇಶ್ ಮಾಹಿತಿ ನೀಡಿದ್ದಾರೆ. ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾದ ಬೆನ್ನಲ್ಲೇ ಪೂರ್ಣ ಪ್ರಮಾಣದ ಶುಲ್ಕ ಸಂಗ್ರಹ ಆರಂಭಿಸಲಾಗಿದೆ.
ನೂತನ ದರ ಪಟ್ಟಿಯ ಅನ್ವಯ ಕಾರು, ವ್ಯಾನ್ ಸೇರಿದಂತೆ ಲಘು ಮೋಟಾರು ವಾಹನಗಳಿಗೆ ಏಕಮುಖ ಸಂಚಾರಕ್ಕೆ 140 ರೂ. ಹಾಗೂ 24 ಗಂಟೆಯೊಳಗೆ ವಾಪಸಾಗುವ ಪ್ರಯಾಣಕ್ಕೆ 205 ರೂ. ನಿಗದಿಪಡಿಸಲಾಗಿದೆ. ಲಘು ವಾಣಿಜ್ಯ ವಾಹನಗಳಿಗೆ ಕ್ರಮವಾಗಿ 220 ರೂ. ಮತ್ತು 335 ರೂ., ಎರಡು ಆಕ್ಸಲ್ಗಳ ಬಸ್ ಮತ್ತು ಲಾರಿಗಳಿಗೆ 465 ರೂ. ಹಾಗೂ 700 ರೂ. ದರ ವಿಧಿಸಲಾಗಿದೆ. ಅದೇ ರೀತಿ ಮೂರು ಆಕ್ಸಲ್ಗಳ ವಾಣಿಜ್ಯ ವಾಹನಗಳಿಗೆ 510 ರೂ. ಮತ್ತು 760 ರೂ., ಭಾರೀ ನಿರ್ಮಾಣ ಯಂತ್ರೋಪಕರಣ ವಾಹನಗಳಿಗೆ 730 ರೂ. ಹಾಗೂ 1,095 ರೂ. ಮತ್ತು ಅತಿಯಾದ ಗಾತ್ರದ ವಾಹನಗಳಿಗೆ ಏಕಮುಖಕ್ಕೆ 890 ರೂ. ಹಾಗೂ ದ್ವಿಮುಖ ಪ್ರಯಾಣಕ್ಕೆ 1,335 ರೂ. ಶುಲ್ಕ ನಿಗದಿ ಮಾಡಲಾಗಿದೆ.
ಸ್ಥಳೀಯ ವಾಣಿಜ್ಯ ವಾಹನಗಳಿಗೆ ರಿಯಾಯಿತಿ ಘೋಷಿಸಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನೋಂದಣಿಯಾಗಿರುವ ವಾಣಿಜ್ಯ ವಾಹನಗಳು ನಿಗದಿತ ಶುಲ್ಕದಲ್ಲಿ ಶೇ. 50ರಷ್ಟು ವಿನಾಯಿತಿ ಪಡೆಯಲಿವೆ. ಅಲ್ಲದೆ, ಯಾವುದೇ ವಾಹನ ವರ್ಗದವರು ತಿಂಗಳಿಗೆ 50 ಏಕಮುಖ ಪ್ರಯಾಣಗಳ ಮಾಸಿಕ ಪಾಸ್ ಪಡೆದುಕೊಂಡರೆ ಒಟ್ಟು ದರದಲ್ಲಿ ಮೂರನೇ ಒಂದು ಭಾಗದಷ್ಟು ರಿಯಾಯಿತಿ ಸಿಗಲಿದೆ.
ಟೋಲ್ ಕೇಂದ್ರದಿಂದ 20 ಕಿಲೋಮೀಟರ್ ವ್ಯಾಪ್ತಿಯೊಳಗೆ ವಾಸಿಸುವ ಖಾಸಗಿ ಲಘು ಮೋಟಾರು ವಾಹನ ಮಾಲೀಕರಿಗೆ ಸ್ಥಳೀಯ ಸಂಚಾರಕ್ಕಾಗಿ ತಿಂಗಳಿಗೆ 360 ರೂ. ದರದಲ್ಲಿ ಮಾಸಿಕ ಪಾಸ್ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಇದೇ ವ್ಯಾಪ್ತಿಯ ಖಾಸಗಿ ಲಘು ವಾಹನ ಮಾಲೀಕರು 1,500 ರೂ. ಪಾವತಿಸಿ ವಾರ್ಷಿಕ ಪಾಸ್ ಸೌಲಭ್ಯವನ್ನೂ ಪಡೆದುಕೊಳ್ಳಬಹುದಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.
2017ರಲ್ಲಿ ಚಾಲನೆ ಪಡೆದ ಬಿ.ಸಿ.ರೋಡ್–ಅಡ್ಡಹೊಳೆ ನಡುವಿನ ಹೆದ್ದಾರಿ ಅಭಿವೃದ್ಧಿ ಯೋಜನೆಯನ್ನು ಇಪಿಸಿ (EPC) ಮಾದರಿಯಲ್ಲಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಇಬ್ಬರು ಗುತ್ತಿಗೆದಾರರ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಬಿ.ಸಿ.ರೋಡ್ನಿಂದ ಪೆರಿಯಶಾಂತಿವರೆಗಿನ 46 ಕಿ.ಮೀ. ಕಾಮಗಾರಿಯ ಗುತ್ತಿಗೆ ಪಡೆದಿದ್ದ ಕೆಎನ್ಆರ್ (KNR) ಕನ್ಸ್ಟ್ರಕ್ಷನ್ ಸಂಸ್ಥೆಯೇ ಈ ವಳಾಲು ಟೋಲ್ ಪ್ಲಾಝಾವನ್ನು ನಿರ್ಮಿಸಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ. ಅಪಾಯಕಾರಿ ತಿರುವುಗಳನ್ನು ನೇರಗೊಳಿಸಿರುವ ಕಾರಣ ಈ ಹೆದ್ದಾರಿಯ ಒಟ್ಟು ಉದ್ದ 65 ಕಿ.ಮೀ.ನಿಂದ 63.6 ಕಿ.ಮೀ.ಗೆ ಕಡಿಮೆಯಾಗಿದ್ದು, ಇದುವರೆಗೆ ಒಟ್ಟಾರೆ ಶೇ. 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









