ಕುಂದಾಪುರ: ಕೋಟೇಶ್ವರದ ಪ್ರಸಿದ್ಧ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನವೆಂಬರ್ 24ರಂದು ಮಹಿಳೆಯೊಬ್ಬರ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಂಗಳಸೂತ್ರ ಸರವನ್ನು ಅಪಹರಿಸಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಂದಾಪುರ ಪೊಲೀಸರು ಯಶಸ್ವಿಯಾಗಿದ್ದು, ನಾಲ್ವರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಬಂಧಿತ ಆರೋಪಿಗಳನ್ನು ಕೊಡಗು ಜಿಲ್ಲೆಯ ಕುಶಾಲನಗರ ನಿವಾಸಿಗಳಾದ ಭಾಗ್ಯ (39) ಮತ್ತು ಎಸ್. ನಾಗರಾಜ (48) ಹಾಗೂ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಶ್ವಿನಿ ಎಲ್. ಯಾನೆ ಗಾಯತ್ರಿ (25), ಕಾಮಾಚಿ (50) ಮತ್ತು ಕೃಷ್ಣಗಿರಿ ಜಿಲ್ಲೆಯ ಆದಮ್ಮಾಳ್ ಯಾನೆ ಆದ್ಯಾಮ್ಮ (49) ಎಂದು ಗುರುತಿಸಲಾಗಿದೆ.
ದೂರಿನ ವಿವರದಂತೆ, ನವೆಂಬರ್ 24ರಂದು ಬೆಳಿಗ್ಗೆ 10.30ರ ಸುಮಾರಿಗೆ ಗೀತಾ ಎಂಬುವವರು ಔಷಧಿ ಖರೀದಿಸುವ ಸಲುವಾಗಿ ಕುಂದಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಕೋಟೇಶ್ವರದಲ್ಲಿ ವಾರ್ಷಿಕ ಕೋಡಿ ಹಬ್ಬದ ಸಂಭ್ರಮವಿದ್ದ ಕಾರಣ, ದಂಪತಿ ಕೋಟೇಶ್ವರ ಬೈಪಾಸ್ ಬಳಿ ಬಸ್ ಇಳಿದು ಕೋಟಿಲಿಂಗೇಶ್ವರ ದೇವಾಲಯದ ದರ್ಶನಕ್ಕೆ ಆಗಮಿಸಿದ್ದರು.
ಬೆಳಿಗ್ಗೆ 11.30ರ ವೇಳೆಗೆ ದೇವರ ದರ್ಶನ ಹಾಗೂ ಪ್ರದಕ್ಷಿಣೆ ಪೂರೈಸಿದ ಗೀತಾ ಅವರು, ಮಧ್ಯಾಹ್ನ 12.30ರ ಸುಮಾರಿಗೆ ಅನ್ನಪ್ರಸಾದ ಸ್ವೀಕರಿಸಲು ಮಂಟಪದ ಹೊರಭಾಗದ ಜನಜಂಗುಳಿಯ ಸಾಲಿನಲ್ಲಿ ನಿಂತಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಅವರ ಕುತ್ತಿಗೆಯಲ್ಲಿದ್ದ ಸುಮಾರು ಏಳು ಪವನ್ ತೂಕದ ಚಿನ್ನದ ಮಂಗಳಸೂತ್ರ ಸರವನ್ನು ಎಗರಿಸಿ ಪರಾರಿಯಾಗಿದ್ದರು.
ಕಳುವಾದ ಚಿನ್ನಾಭರಣದ ಅಂದಾಜು ಮೌಲ್ಯ 6 ಲಕ್ಷ ರೂ. ಆಗಿದ್ದು, ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಕುಂದಾಪುರ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 305ರ ಅಡಿಯಲ್ಲಿ ಅಪರಾಧ ಸಂಖ್ಯೆ 05/2026 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದರು.
ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಂದ ಕಳುವಾಗಿದ್ದ ಏಳು ಪವನ್ ತೂಕದ ಚಿನ್ನದ ಮಂಗಳಸೂತ್ರ ಸರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕೃತ್ಯಕ್ಕೆ ಬಳಸಲಾಗಿದ್ದ KA 01 MR 7991 ನೋಂದಣಿ ಸಂಖ್ಯೆಯ ಬೆಳ್ಳಿ ಬಣ್ಣದ ಮಹೀಂದ್ರಾ TUV 300 ಕಾರನ್ನು ಸಹ ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾದ ಕಾರಿನ ಮೌಲ್ಯ ಸುಮಾರು 3 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು, ಆರೋಪಿಗಳ ಬಳಿಯಿದ್ದ ಏಳು ಮೊಬೈಲ್ ಫೋನ್ಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ, ವೃತ್ತ ನಿರೀಕ್ಷಕ ಜಯರಾಮ ಡಿ. ಗೌಡ ಅವರ ನೇತೃತ್ವದಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದೆ. ತಂಡದಲ್ಲಿ ಉಪನಿರೀಕ್ಷಕರಾದ ನಂಜನಾಯಕ್ ಎನ್ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಪುಷ್ಪಾ (ತನಿಖೆ), ಸಿಬ್ಬಂದಿಗಳಾದ ಮೋಹನ್, ಸಂತೋಷ್ ಕುಮಾರ್, ಮಹಾಬಲ ಶೆಟ್ಟಿಗಾರ್, ಚಂದ್ರಶೇಖರ ಅರೆಶಿರೂರು, ಘನಶ್ಯಾಮ್, ಸಂತೋಷ್ ದೇವಾಡಿಗ, ಗೌತಮ್, ಲೋಹಿತ್, ನಾರಾಯಣ, ಪದ್ಮಾವತಿ, ರೇವತಿ, ಭಾಗೀರಥಿ, ರಾಜೀಂ ಬಿ.ಆರ್.ಡಿ., ದಿನೇಶ್ ಮತ್ತು ನಿತಿನ್ ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









