ಉಡುಪಿ : ಭಾರತದಿಂದ ಪರಾರಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ರಾಜೇಶ್ ಕೇಶವ ಆಚಾರ್ಯನನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ಭಾರತಕ್ಕೆ ಕರೆತರುವಲ್ಲಿ ತನಿಖಾ ಸಂಸ್ಥೆಗಳು ಯಶಸ್ವಿಯಾಗಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ), ಗೃಹ ಸಚಿವಾಲಯ (ಎಂಹೆಚ್ಎ) ಹಾಗೂ ಕರ್ನಾಟಕ ಪೊಲೀಸರ ಜಂಟಿ ಸಹಕಾರದೊಂದಿಗೆ ಕೇಂದ್ರ ತನಿಖಾ ದಳ (ಸಿಬಿಐ) ನಡೆಸಿದ ಕಾರ್ಯಾಚರಣೆಯ ಫಲವಾಗಿ ಶುಕ್ರವಾರ (ನವೆಂಬರ್ 27) ಈತನನ್ನು ಗಡಿಪಾರು ಮಾಡಲಾಗಿದೆ.
ಭೂಗತ ಲೋಕದ ಪಾತಕಿ ಕಲಿ ಯೋಗೀಶ್ ಸಹಚರನಾಗಿ ಗುರುತಿಸಿಕೊಂಡಿರುವ ರಾಜೇಶ್ ಆಚಾರ್ಯ, 2002ರಲ್ಲಿ ನಡೆದಿದ್ದ ಮನೋಹರ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ (ಅಪರಾಧ ಸಂಖ್ಯೆ 251/2002) ದಾಖಲಾಗಿರುವ ಈ ಕೇಸ್ನಲ್ಲಿ, ಕೊಲೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪ ಈತನ ಮೇಲಿದೆ.
ಆರೋಪಿಯನ್ನು ದೇಶಕ್ಕೆ ವಾಪಸ್ ಕರೆತರುವ ನಿಟ್ಟಿನಲ್ಲಿ ಪೊಲೀಸರು ತೀವ್ರ ಕಾನೂನು ಕ್ರಮಗಳನ್ನು ಕೈಗೊಂಡಿದ್ದರು. 2026ರ ಮೇ ತಿಂಗಳಲ್ಲಿ ಆಚಾರ್ಯನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿತ್ತು ಹಾಗೂ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಆತನ ಪಾಸ್ಪೋರ್ಟ್ ರದ್ದುಪಡಿಸಲಾಗಿತ್ತು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.
2002ರ ಜುಲೈ ತಿಂಗಳಲ್ಲಿ ಇತರ ಸಹಚರರೊಂದಿಗೆ ಸೇರಿ ಮನೋಹರ್ ಶೆಟ್ಟಿ ಕೊಲೆಗೆ ಆಚಾರ್ಯ ಸಂಚು ರೂಪಿಸಿದ್ದ ಎಂದು ಸಿಬಿಐ ಸ್ಪಷ್ಟಪಡಿಸಿದೆ. 2019ರಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದ ಈತನ ಸೇರಿದಂತೆ ಪ್ರಕರಣದ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಲಾಗಿದೆ.
ಕರ್ನಾಟಕ ಪೊಲೀಸರ ಮನವಿಯ ಮೇರೆಗೆ ನವದೆಹಲಿಯ ಇಂಟರ್ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ (ಎನ್ಸಿಬಿ) ರೆಡ್ ನೋಟಿಸ್ ಪ್ರಕಟಿಸಲು ನೆರವು ನೀಡಿತ್ತು. ಇದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಯುಎಇ ಅಧಿಕಾರಿಗಳು ಆಚಾರ್ಯನನ್ನು ಪತ್ತೆಹಚ್ಚಿ ಬಂಧಿಸಿದ್ದರು. ಅಲ್ಲಿನ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಆತನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ.
ಶುಕ್ರವಾರ (ನವೆಂಬರ್ 27) ಯುಎಇಯಿಂದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಜೇಶ್ ಆಚಾರ್ಯನನ್ನು ಕರ್ನಾಟಕ ಪೊಲೀಸರು ಅಧಿಕೃತವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿಗೆ ಕರೆತಂದು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿ ಜಿಲ್ಲಾ ಪೊಲೀಸರನ್ನೊಳಗೊಂಡ ವಿಶೇಷ ಜಂಟಿ ತಂಡ ಮುಂಬೈಗೆ ತೆರಳಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ದೇಶದಾದ್ಯಂತ ಇರುವ ತನಿಖಾ ಸಂಸ್ಥೆಗಳೊಂದಿಗೆ ‘ಭಾರತ್ಪೋಲ್’ ಮೂಲಕ ಅಂತರರಾಷ್ಟ್ರೀಯ ಪೊಲೀಸ್ ಸಹಕಾರವನ್ನು ಸಿಬಿಐ ಸಮನ್ವಯಗೊಳಿಸುತ್ತಿದೆ. ಇಂಟರ್ಪೋಲ್ ನೆರವಿನೊಂದಿಗೆ 2019ರಿಂದ ಈವರೆಗೆ ಒಟ್ಟು 300ಕ್ಕೂ ಹೆಚ್ಚು ಬೇಕಾಗಿದ್ದ ಅಪರಾಧಿಗಳನ್ನು ಭಾರತಕ್ಕೆ ವಾಪಸ್ ಕರೆತರಲಾಗಿದ್ದು, ಇದರಲ್ಲಿ 2026ರಲ್ಲೇ ಕರೆತರಲಾದ 77 ಪರಾರಿ ಆರೋಪಿಗಳೂ ಸೇರಿದ್ದಾರೆ ಎಂದು ಸಿಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









